

ಚಿಕ್ಕಬಳ್ಳಾಪುರ: ಹನ್ನೊಂದನೇ ಶತಮಾನದಲ್ಲಿಯೇ ಸರ್ವ ಧರ್ಮ ಸಮನ್ವಯ ತತ್ವಗಳನ್ನೊಳಗೊಂಡ ವಚನಗಳನ್ನು ರಚಿಸಿದ ಮೊದಲ ವಚನಕಾರ ದೇವರ ದಾಸಿಮಯ್ಯ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ತಿಳಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಇಲ್ಲಿಯವರೆಗೂ ದೇವರ ದಾಸಿಮಯ್ಯರ ಸುಮಾರು 176 ವಚನಗಳು ದೊರೆತಿವೆ. ನೇರ, ಸರಳ, ಅಡು ಭಾಷೆ ಹಾಗೂ ಉಪಮೇಯವಾಗಿ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನ ರಚಿಸಿದ್ದಾರೆ. ಆ ನಂತರ ಬಂದಂತಹ ಶರಣರ ವಚನಗಳಲ್ಲೂ ದಾಸಿಮಯ್ಯನವರ ವಚನಗಳು ಗಾಢ ಪ್ರಭಾವ ಬೀರಿರುವುದನ್ನು ಕಾಣಬಹುದು ಎಂದರು.
ಕಾಯಕ ನಿಷ್ಠೆ ಉಳ್ಳವರಾಗಿದ್ದ ದಾಸಿಮಯ್ಯ ಕಾಯಕವೇ ಕೈಲಾಸವೆಂದು ನಿಷ್ಠೆ, ಭಕ್ತಿದಾಯಕ ವಚನಗಳ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಇವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಲ್ಲೂ ಪ್ರತಿ ಮಕ್ಕಳಿಗೆ ಕಡ್ಡಾಯವಾಗಿ ವಚನಗಳ ಸಾರ ಮತ್ತು ಮಹತ್ವವ ತಿಳಿಸಬೇಕು ಎಂದು ಹೇಳಿದರು.
ಕೈಮಗ್ಗ ಹಾಗೂ ಜವಳಿ ಇಲಾಖೆಯ ಉಪನಿರ್ದೇಶಕ ಶಿವಕುಮಾರ್ ಮಾತನಾಡಿ, ನೇಕಾರರ ವರ್ಗದವರ ಅಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಸೌಲಭ್ಯ ಕಲ್ಪಿಸುತ್ತಿದೆ. ಇದನ್ನು ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಜಿಲ್ಲೆಯ ನೇಕಾರ ವರ್ಗದವರು ವಿದ್ಯುತ್ ಮಗ್ಗ ನೇಕಾರರ ಘಟಕಕ್ಕೆ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳಬೇಕು. ಸವಲತ್ತುಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದರು.
ನೇಕಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ಲಕ್ಷ್ಮೀಪತಿ ಮಾತನಾಡಿ, ಹಿಂದಿನಿಂದಲೂ ನೇಕಾರ ವರ್ಗದವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಇದಕ್ಕೆ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಸೌಲಭ್ಯಗಳನ್ನು ಸಮರ್ಪಕವಾಗಿ ಕಟ್ಟ ಕಡೆಯ ವ್ಯಕ್ತಿಗೂ ದೊರಕಿಸಿಕೊಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಎಲ್.ಎಂ.ಗಿರಿಜಾಕಲ್ಯಾಣಿ ಮಾತನಾಡಿ, ಎಲ್ಲ ಕಾಲಕ್ಕೂ ದೇವರದಾಸಿಮಯ್ಯ ವಚನಗಳು ಮಹತ್ವ ಉಳಿಸಿಕೊಂಡಿರುತ್ತವೆ. ಇವುಗಳ ಅಧ್ಯಯನ, ಪಾಲನೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ತಿಳಿಸಿದರು. ಸಂಗೀತ ಕಲಾವಿದ ನಟರಾಜು ದಾಸಿಮಯ್ಯ ನವರ ವಚನಗಳನ್ನು ಹಾಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಮ್.ರವಿಕುಮಾರ್, ನೇಕಾರ ಸಂಘದ ಉಪಕಾರ್ಯದರ್ಶಿ ಕುಶಾಲ್ ಕುಮಾರ್ ಮತ್ತಿತರರು ಇದ್ದರು.