

ಬಸವಕಲ್ಯಾಣ: ಅಗೋ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು. ಇದು ಕವನ ಸಂಕಲನದ ಅಪರೂಪದ ಶೀರ್ಷಿಕೆ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಹೇಳಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ, ಅಭಿನವಶ್ರೀ ಪ್ರಕಾಶನ, ಪ್ರತಿಮಾ ಪ್ರಕಾಶನದ ಸಹಯೋಗದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಶರಣ ಕಾಯಕ ಪ್ರಶಸ್ತಿ ಪ್ರದಾನ ಹಾಗೂ ವೀರಶೆಟ್ಟಿ ಎಂ. ಪಾಟೀಲ್ ಅವರ 'ಅಗೋ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು' ಸಂಪಾದಿತ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಶರಣರು, ಸಂತರು, ಅತ್ಯಂತ ವಿಶಿಷ್ಟ ಸ್ಥಾನ ಪಡೆದವರು. ಶರಣರ ವಚನಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪಗಳಾಗಿವೆ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿದ ಸಿಪಿಐ ಅಲಿಸಾಬ್ ಮಾತನಾಡಿ, ವಿದ್ಯಾರ್ಥಿ ಆಗಿದ್ದಾಗ ನಾನು ಕೆಲ ಕವನಗಳನ್ನು ಬರೆದಿದ್ದು, ಕನ್ನಡ ಭಾಷೆಯ ಬಗ್ಗೆ ಅಭಿಮಾನವಿದೆ. ಸಾಹಿತ್ಯದ ಬಗ್ಗೆ ಆಸಕ್ತಿ ಇದೆ. ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಸಾಹಿತ್ಯಕ್ಕೆ ಇದೆ. ಯುವ ಸಮೂಹದಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಕಟ್ಟಿರುವ ಕಟ್ಟಡ ಬಿದ್ದು ಹೋಗುತ್ತದೆ. ಕೊಟ್ಟಿರುವ ದುಡ್ಡು ಖರ್ಚಾಗಿ ಹೋಗುತ್ತದೆ. ಆದರೆ ಸಾಹಿತ್ಯ ಶಾಶ್ವತ. ಪ್ರತಿವರ್ಷ ವೀರಶೆಟ್ಟಿ ಎಂ. ಪಾಟೀಲರು ಒಂದೊಂದು ಪುಸ್ತಕ ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿದ್ದರು. ಬಾಲಕ ಸಾತ್ವಿಕ ವೀರಶೆಟ್ಟಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಶಾಂತಲಿಂಗ ಮಠಪತಿ ಪ್ರಾಸ್ತಾವಿಕ ಮಾತನಾಡಿದರು.
ಪ್ರಮುಖರಾದ ತುಳಸಿರಾಮ ಕುಂಬಾರೆ, ರುದ್ರೇಶ್ವರ ಗೋರ್ಟಾ, ನಾಗಪ್ಪ ನಿಣ್ಣೆ, ಡಾ.ಚಿತ್ರಶೇಖರ ಚಿರಳ್ಳಿ, ಡಾ.ವಿ.ಎಸ್.ಮಂಡಿ, ಡಾ.ವಿ.ಎಸ್.ರಾಜೋಳೆ, ಗೋವಿಂದರೆಡ್ಡಿ ಕೋತಾಪಳ್ಳಿ, ಬಸವರಾಜ ಸೇರಿ, ಮಾಣಿಕ ಸಂಗನಬಟ್ಟೆ, ಮಲ್ಲಿಕಾರ್ಜುನ ಅಲಗೂಡೆ, ಶಶಿಧರ ಪಾಟೀಲ್, ಬಸವರಾಜ ರೋಳಾ ಸ್ವಾಮಿ, ಸೈಯದ್ ಶಾ ಇತರರಿದ್ದರು.
ನಿತೀನ ನೀಲಕಂಠೆ ಸ್ವಾಗತಿಸಿದರು. ಪ್ರತಿಮಾ ಪಾಟೀಲ್ ವಂದಿಸಿದರು. ನಾಗೇಂದ್ರ ಬಿರಾದಾರ ನಿರೂಪಣೆ ಮಾಡಿದರು.
ಪ್ರೊ.ಶಂಭುಲಿಂಗ ಕಾಮಣ್ಣ, ಸಂತೋಷ ಅಕ್ಕಣ್ಣ, ನಾಗರಾಜ ಹಾವಣ್ಣ, ವಿಶ್ವನಾಥಯ್ಯ ಮಠಪತಿ, ಸೂರ್ಯಕಾಂತ ಮೈಲಾರೆ, ಅವರಿಗೆ ಶರಣ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವನ ಬರೆದವರಿಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.