ಶರಣರ ವಚನಗಳಲ್ಲಿ ಪರಿಸರ ಕಾಳಜಿ ವ್ಯಕ್ತ

mysore
Published on

ಮೈಸೂರು: ನಾವು ಪರಿಸರವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ನಿವೃತ್ತ ಶಿಕ್ಷಕ ಬಿ.ರವೀಶ್ ಕುಮಾರ್ ಹೇಳಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಮೈಸೂರು ಜೆಎಸ್‌ಎಸ್ ಆಸ್ಪತ್ರೆ ಆವರಣದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 318ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಪರಿಸರಪ್ರಜ್ಞೆ ಎಂಬ ವಿಷಯ ಕುರಿತು ಮಾತನಾಡಿದರು.

ಶರಣರು, ಸಂತರು ನುಡಿದಂತೆ ನಡೆದರು. ಆದರೆ ಇಂದು ನಾವುಗಳು ಅದನ್ನು ಪಾಲಿಸುತ್ತಿಲ್ಲ. ಒಂದು ಕಡೆ ಪರಿಸರ ಉಳಿಯಬೇಕೆಂದು ಹೇಳಿ ಗಿಡ ನೆಡುತ್ತೇವೆ. ಇನ್ನೊಂದೆಡೆ ಪರಿಸರವನ್ನು ನಾನಾ ರೀತಿಯಲ್ಲಿ ಹಾಳು ಮಾಡುತ್ತೇವೆ. ಬಸವಾದಿ ಶರಣರು ಅನೇಕ ವಚನಗಳಲ್ಲಿ ಪರಿಸರದ ಬಗೆಗಿನ ಕಾಳಜಿ, ಕಳಕಳಿ ವ್ಯಕ್ತಪಡಿಸಿದ್ದಾರೆ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಲೆಕ್ಕ ಮತ್ತು ಲೆಕ್ಕ ಪರಿಶೋಧನ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ ಮಾತನಾಡಿ, ಎಲ್ಲ ಧರ್ಮಗಳ ಸಾರ ಒಂದೇ. ಸರ್ವರಿಗೂ ಹಿತ ಬಯಸುವುದೇ ಎಲ್ಲ ಧರ್ಮಗಳ ಆದ್ಯ ಕೆಲಸ. ರಾಮಾಯಣ, ಮಹಾಭಾರತಗಳಲ್ಲಿ ನಡೆದ ಘಟನೆಗಳು ಇಂದು ಪರೋಕ್ಷವಾಗಿ ಕಂಡುಬರುತ್ತಿವೆ. ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.

ಮುಖಂಡರಾದ ಕೆ.ಆರ್.ನಟರಾಜು, ನಗರ್ಲೆ ಶಿವಕುಮಾರ ಇತರರು ಇದ್ದರು. ಕುಮಾರಿ ಎನ್. ಚೂಡಾಮಣಿ ಅವರು ವಚನ ಗಾಯನವನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net