ಶರಣರ ಮಾನವೀಯ ಮೌಲ್ಯಗಳು ಜಗತ್ತಿಗೆ ಅಗತ್ಯ

Capture
Published on

ಹುಮನಾಬಾದ್: ಬಸವಾದಿ ಶರಣರ ಸಮಾನತೆ ತತ್ವ ಹಾಗೂ ಮಾನವೀಯ ಮೌಲ್ಯಗಳು ಜಗತ್ತಿಗೆ ಇಂದು ಅತ್ಯಂತ ಅಗತ್ಯವಾಗಿವೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.

ಅಮೀರಾಬಾದ್ ಗ್ರಾಮದಲ್ಲಿ ಭಾನುವಾರ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಹಾಗೂ ನೂತನ ಬಸವ ಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು ಸಮಾನತೆಯ ತತ್ವ ನೀಡಿದ್ದಾರೆ. ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದರು.

ಇಂದಿನ ಜಂಜಾಟದ ಬದುಕಿನಲ್ಲಿ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯಬೇಕಾದರೆ ಸತ್ಸಂಗ, ಧರ್ಮ ಸಭೆಯಲ್ಲಿ ಪಾಲ್ಗೊಳ್ಳಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡುವುದು ಮುಖ್ಯವಾಗಿದ್ದು, ಇದರಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಸವ ಮಂಟಪ ನಿರ್ಮಾಣಕ್ಕೆ ದಿ.ಬಸವರಾಜ ಪಾಟೀಲ್ ಅವರ ಅವಧಿಯಲ್ಲಿ 10 ಲಕ್ಷ ರೂ. ಹಾಗೂ ನನ್ನ ಅವಧಿಯಲ್ಲಿ 10 ಲಕ್ಷ ರೂ. ಅನುದಾನ ಒದಗಿಸಿಕೊಡಲಾಗಿದೆ. ಇನ್ನೂ ಅಗತ್ಯ ಇರುವ ಅಭಿವೃದ್ಧಿ ಕೆಲಸಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು. ದಾಸೋಹಕ್ಕೆ 5 ಲಕ್ಷ ರೂ. ಒದಗಿಸುವುದಾಗಿ ಹೇಳಿದರು. ಬೆಂಗಳೂರಿನಲ್ಲಿ ಬಸವಣ್ಣನವರ 112 ಅಡಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯದ ಬಗ್ಗೆ ಮುಖ್ಯಮಂತ್ರಿಗೆ ಸಹಾಯಧನ ಒದಗಿಸಲು ಮನವಿ ಮಾಡುವುದಾಗಿ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪೀಠಾಧ್ಯಕ್ಷೆ ಪೂಜ್ಯ ಡಾ.ಗಂಗಾದೇವಿ ಮಾತಾಜಿ ಆಶೀರ್ವಚನ ನೀಡಿ, ಬಸವ ಧರ್ಮ ಪ್ರಚಾರಕ್ಕಾಗಿ ಶ್ರೀ ಲಿಂಗಾನಂದ ಸ್ವಾಮಿ, ಮಾತೆ ಮಹಾದೇವಿ ಮಾತಾಜಿ ಅವರು ಈ ಭಾಗದಲ್ಲಿ ಪ್ರವಚನಗಳ ಮೂಲಕ ಸಾಕಷ್ಟು ಜಾಗೃತಿ ಮೂಡಿಸಿದ್ದು, ಇದನ್ನು ನಿರಂತರವಾಗಿ ನಾವೆಲ್ಲರೂ ಪಾಲಿಸುವ ಮೂಲಕ ಬಸವಧರ್ಮ ಎಲ್ಲೆಡೆ ಪಸರಿಸುವಂತೆ ಶ್ರಮಿಸಬೇಕೆಂದು ಹೇಳಿದರು.

ಹುಲಸೂರು ಶ್ರೀ ಡಾ.ಶಿವಾನಂದ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ 3 ದಿನಗಳ ಕಾಲ ನಡೆದ ಕಾರ್ಯಕ್ರಮ ಯಶಸ್ಸಿಗೆ ಭಕ್ತರ ಸಹಕಾರವೇ ಕಾರಣ. ಬಸವಣ್ಣನವರ ಅಂಕಿತನಾಮ ಲಿಂಗದೇವ ಹಿಂತೆಗೆದುಕೊಂಡಿರುವ ಪೂಜ್ಯ ಡಾ.ಗಂಗಾದೇವಿ ಮಾತಾಜಿಯವರ ಕಾರ್ಯದಿಂದ ನಾವೆಲ್ಲರೂ ಒಟ್ಟಿಗೆ ಭಾಗವಹಿಸಲು ಸಾಧ್ಯವಾಗಿದೆ ಎಂದರು.

ಭಾಲ್ಕಿ ಹಿರೇಮಠದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗ್ರಾಮದಲ್ಲಿ ಬಸವ ಮಂಟಪ ನಿಮರ್ಿಸಿರುವುದು ಸ್ವಾಗರ್ತವಾಗಿದೆ. ಅದರಂತೆ ದಿನನಿತ್ಯ ಪ್ರಾರ್ಥನೆ ನಡೆಸುವ ಮೂಲಕ ಬಸವಣ್ಣನವರ ತತ್ವಗಳ ಪ್ರಚಾರ ನಡೆಸಬೇಕೆಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶರಣರ ತತ್ವ ಪ್ರಚಾರಕ್ಕೆ ಹಾಗೂ ಸಮಾಜದ ಸಂಘಟನೆಗೆ ಮುಂದಾಗಬೇಕೆಂದು ಹೇಳಿದರು.

ಎಂಎಲ್ಸಿ ಭೀಮರಾವ ಪಾಟೀಲ್, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ.ಶೆಟಕಾರ, ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಬಸವರಾಜ ಧನ್ನೂರ್, ರಾಷ್ಟ್ರೀಯ ಬಸವದಳ ತೆಲಂಗಾಣ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ್ ಜಹೀರಾಬಾದ್, ಪ್ರಮುಖರಾದ ಬಸವರಾಜ ಬುಳ್ಳಾ, ದಿಲೀಪಕುಮಾರ ತಾಳಂಪಳ್ಳಿ, ಮಹಾಂತಯ್ಯ ತೀರ್ಥ, ಶಿವಾನಂದ ಸ್ವಾಮಿ ಡಾಕುಳಗಿ, ರಾಜಕುಮಾರ ಗಂದಗೆ, ಜೈರಾಜ ಖಂಡ್ರೆ, ಮಲ್ಲಿಕಾರ್ಜುನ ಮಾಶೆಟ್ಟಿ, ಸುರೇಶಕುಮಾರ ಇತರರಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಸುಭಾಷ ಗೌರಿ ಸ್ವಾಗತಿಸಿದರು. ಸುರೇಶಕುಮಾರ ಸ್ವಾಮಿ ನಿರೂಪಣೆ ಮಾಡಿದರು. ಸುರೇಶ ಮರೂರಕರ್ ವಂದಿಸಿದರು.

ಬಸವಾದಿ ಶರಣರು ಎಲ್ಲ ಜಾತಿ, ಜನಾಂಗದವರಿಗೆ ಸಮಾನತೆಯಿಂದ ಬದುಕುವ ಸಂದೇಶ ಸಾರಿದ್ದಾರೆ. ಅವರ ವಿಚಾರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ಸಾಗಿಸಬೇಕು.
ಪೂಜ್ಯ ಡಾ.ಗಂಗಾದೇವಿ ಮಾತಾಜಿ, ಕೂಡಲಸಂಗಮ ಪೀಠಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net