ಶರಣರ ಭೂಮಿಯಲ್ಲಿ ವಚನ ವೈಭವ

30bk2
Published on

ಬಸವಕಲ್ಯಾಣ: ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಆನೆ. ಕುದರೆ, ಒಂಟೆಗಳ ಮೇಲೆ ಗಮನ ಸೆಳೆದ ಬಸವಾದಿ ಶರಣರ ವೇಷಧಾರಿಗಳು. ಕಲಾ ತಂಡಗಳಿAದ ವೈವಿಧ್ಯಮಯ ಪ್ರದರ್ಶನ. ವಚನ ಸಂಗೀತಕ್ಕೆ ಹೆಜ್ಜೆ ಹಾಕಿದ ಬಸವ ಭಕ್ತರು, ಮೊಳಗಿದ ಘೋಷಣೆ. ಶರಣರ ಭೂಮಿಯಲ್ಲಿ ಎಲ್ಲೆಲ್ಲೂ ವಚನ ವೈಭವ, ಶರಣ ಸಂಸ್ಕೃತಿ ಸೌರಭ…

ಇದು ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನ ನಡೆದ ೨೨ನೇ ಕಲ್ಯಾಣ ಪರ್ವದ ನಿಮಿತ್ತ ಸೋಮವಾರ ನಗರದಲ್ಲಿ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ನಡೆದ ವಚನ ಸಾಹಿತ್ಯದ ಮೆರವಣಿಗೆಯಲ್ಲಿ ಕಂಡ ದೃಶ್ಯಗಳು.
ಕಲ್ಯಾಣದ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಬಸವ ಮಹಾಮನೆವರೆಗೆ ಆನೆ ಮೇಲೆ ಪುಷ್ಪಾಲಂಕೃತ ಅಂಬಾರಿಯಲ್ಲಿ ಗುರು ಬಸವಣ್ಣನವರ ಮೂರ್ತಿ ಹಾಗೂ ವಚನ ಸಾಹಿತ್ಯದ ಅದ್ದೂರಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿದೆ ಜರುಗಿತು. ಅಲಂಕೃತ ಸಾರೋಟಿಯಲ್ಲಿ ಬಸವಾದಿ ಶರಣರ ಭಾವವಿತ್ರ ಇದ್ದರೆ ಕುದರೆ, ಒಂಟೆಗಳ ಮೇಲೆ ಬಸವಾದಿ ಶರಣರ ವೇಷಧಾರಿಗಳ ಗಮನ ಸೆಳೆದರು.

ಕೋಲಾಟ, ಝಾಂಜ್​ ಮೇಳ, ಡೊಳ್ಳು, ವಚನ ಭಜನೆ ಹಾಗೂ ವಿವಿಧ ಕಲಾ ತಂಡಗಳಿಂದ ನಡೆದ ಪ್ರದರ್ಶನ ಜಾನಪದ ಕಲಾ ಸಂಸ್ಕೃತಿ ಮತ್ತು ಶರಣ ಸಂಸ್ಸತಿಯನ್ನು ಅನಾವರಣಗೊಳಿದರೆ, ಛತ್ರಿ-ಚಾಮರಗಳು ಮೆರವಣಿಗೆಗೆ ಮೆರಗು ಹೆಚ್ಚಿಸಿದವು. ಮೆರವಣಿಗೆಯುದ್ದಕ್ಕೂ ವಚನ ಗಾಯನಕ್ಕೆ ಟೋಪಿ, ಷಟಸ್ಥಲ ಕ್ಯಾಪ್ ಹಾಕಿದ್ದ ಬಸವ ಭಕ್ತರು, ವಿಶೇಷವಾಗಿ ಯುವಕರು ಹೆಜ್ಜೆ ಹಾಕಿ ಗಮನ ಸೆಳೆದರು.

ಮೆರವಣಿಗೆಗೆ ಚಾಲನೆ ನೀಡಿದ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಶರಣರು ನೀಡಿದ ತತ್ವಗಳು ಸಾರ್ವಕಾಲಿಕ ಎಂದರು.
ಸಹಾಯಕ ಆಯುಕ್ತ ಪ್ರಕಾಶ ಕುದರಿ, ಕಲ್ಯಾಣ ಪರ್ವ ಮೆರವಣಿಗೆ ಸಮಿತಿ ಅಧ್ಯಕ್ಷ ಸಿದ್ರಾಮ ಶೆಟಗಾರ ಮಾತನಾಡಿ, ಶರಣರು ನೀಡಿದ ವಚನ ಸಾಹಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಎಲ್ಲರಲ್ಲಿಯೂ ವಚನ ಸಾಹಿತ್ಯದ ಬಗ್ಗೆ ಅಭಿಮಾನ ಮೂಡಬೇಕು ಎಂದರು.

ಸಿಪಿಐ ಅಲಿಸಾಬ್ ಮಾತನಾಡಿ, ಶರಣರು ರಚಿಸಿದ ವಚನ ಸಾಹಿತ್ಯ ಮನುಕುಲದ ಏಳಿಗೆಗಾಗಿದೆ. ಅವರು ನೀಡಿದ ಕೊಡುಗೆಯನ್ನು ಅರ್ಥ ಮಾಡಿಕೊಂಡರೆ ಜೀವನ ಸಾಗಿಸಿದರೆ ಯಾವುದೇ ಅಹಿತಕರ ಘಟನೆಗಳು ಜರುಗುವುದಿಲ್ಲ ಎಂದರು.

ತಹಸೀಲ್ದಾರ್ ಶಾಂತಗೌಡ ಬಿರಾದಾರ ಹಾಗೂ ಸಿಪಿಐ ಅಲಿಸಾಬ ಅವರು ವಚನ ಪಠಿಸಿದರು. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ ತಾಯಿ, ಶಾಸಕ ಶರಣು ಸಲಗರ, ಬಿಇಒ ಸಿ.ಜೆ. ಹಳ್ಳದ್, ಕುಶಾಲರಾವ ಪಾಟೀಲ್ ಗಾದಗಿ, ರಾಜೇಂದ್ರಕುಮಾರ ಗಂದಗೆ, ಸೋಮಶೇಖರ ಪಾಟೀಲ್ ಗಾದಗಿ, ಆರ್.ಜಿ. ಶೆಟಗಾರ, ರವೀಂದ್ರ ಕೊಳಕೂರ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಮಲ್ಲಿಕಾರ್ಜುನ ಚಿರಡೆ, ಸುಭಾಷ ಹೊಳಕುಂದೆ, ಶ್ರೀಕಾಂತ ಬಡದಾಳೆ, ಸೋಮಶೇಖರ ವಸ್ತçದ, ಜಗನ್ನಾಥ ಖೂಬಾ, ನಾಗಯ್ಯ ಸ್ವಾಮಿ ಸೇರಿದಂತೆ ಪೂಜ್ಯರು, ಗಣ್ಯರು, ಅಧಿಕಾರಿಗಳು, ಸಂಘ-ಸAಸ್ಥೆ ಪದಾಧಿಕಾರಿಗಳು, ವಿವಿಧೆಡೆಯಿಂದ ಆಗಮಿಸಿದ ಬಸವ ಭಕ್ತರು ಪಾಲ್ಗೊಂಡಿದ್ದರು. ವಿವಿಧ ಪೂಜ್ಯರು, ನಾಡಿನ ವಿವಿಧೆಡೆಯಿಂದ ಆಗಮಿಸಿದ ಬಸವ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net