ಶರಣರ ಬದುಕು ಯುವ ಜನತೆಗೆ ಮಾದರಿ

11blrp3
Published on

ಬೇಲೂರು: ಹನ್ನೆರಡನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ವಚನಾಕಾರರು ನೀಡಿದ ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ಹೇಳಿದರು.


ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಮತ್ತು ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ತಾಳೆ ಗರಿಗಳನ್ನು ಹಳಕಟ್ಟಿ ಸಂಗ್ರಹಿಸಿ, ಅವುಗಳಿಗೆ ಗ್ರಂಥರೂಪ ನೀಡುವ ಮೂಲಕ ವಚನ ಚಳವಳಿಯ ನೆನಪು ಮಾಡಿದ್ದಾರೆ. 12ನೇ ಶತಮಾನದ ಶರಣರ ಜಾತಿ, ಧರ್ಮ, ವರ್ಗ ಮೀರಿದ ಬದುಕು ಇಂದಿನ ಯುವಜನತೆಗೆ ಮಾದರಿಯಾಗಬೇಕಿದೆ. ವಚನ ಸಾಹಿತ್ಯವನ್ನು ಯುವಜನತೆಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ವಚನ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಹಡಪದ ಅಪ್ಪಣ್ಣನ ಕಾಯಕ ನಿಷ್ಠೆ ಮತ್ತು ಸಾಮಾಜಿಕ ಪರಿಕಲ್ಪನೆ ನಿಜಕ್ಕೂ ಅಗಮ್ಯವಾಗಿದೆ. ಜಗತ್ತಿನ ಇತಿಹಾಸದಲ್ಲಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡ ಕಾಯಕ ಚಳವಳಿಯಲ್ಲಿ ಜಾತಿ, ಧರ್ಮ, ಶೋಷಣೆ, ಅವಮಾನದಿಂದ ದುಡಿಯುವ ವರ್ಗವನ್ನು ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಬಸವಾದಿ ಶರಣರು ಚತುರ್ವರ್ಣ ವ್ಯವಸ್ಥೆ ಮತ್ತು ಅಸಮಾನತೆ ವಿರುದ್ಧವಾಗಿ ಕಾಯಕ ಜೀವಿಗಳನ್ನು ಅಪ್ಪಿಕೊಂಡರು. ವೃತ್ತಿಯಲ್ಲಿ ಕ್ಷೌರಿಕನಾಗಿದ್ದ ಹಡಪದ ಅಪ್ಪಣ್ಣನನ್ನು ತನ್ನ ಆತ್ಮೀಯರಲ್ಲಿ ಆತ್ಮೀಯ ಎಂದು ಹೇಳಿದ ಬಸವಣ್ಣನವರ ದೊಡ್ಡ ಗುಣ ನಮಗೆ ದಾರಿದೀಪವಾಗಿದೆ ಎಂದರು.


ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಪೂರ್ಣಪ್ರಜ್ಞಾ ಶಾಲೆ ಪ್ರಾಂಶುಪಾಲ ಪ್ರಶಾಂತ್‌ಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ಅಧ್ಯಕ್ಷ ಚಂದನ್‌ಕುಮಾರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಹೇಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net