

ಸೊರಬ: ಬಸವ, ಶರಣಾದಿಗಳ ವಚನ, ತತ್ವ, ಸಿದ್ಧಾಂತಗಳು ಸಮಾಜದ ಪರಿವರ್ತನೆಗೆ ಪೂರಕವಾಗಿದ್ದು ಇಂದಿಗೂ ತನ್ನದೇ ಆದ ಮೌಲ್ಯ ಉಳಿಸಿಕೊಂಡು ಪ್ರತಿಯೊಬ್ಬರ ಜೀವನಕ್ಕೂ ಮಾರ್ಗದರ್ಶನವಾಗಿವೆ ಎಂದು ಜಡೆ ಸಂಸ್ಥಾನಮಠ, ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಮುರುಘಾಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ನಿಂದ ಬಸಮ್ಮ ಹುಲಿಯಪ್ಪ ಅತ್ತಿಗುಂದ ಸ್ಮರಣಾರ್ಥ ಹಮ್ಮಿಕೊಂಡಿದ್ದ ಬೆಂಗಳೂರಿನ ಎಚ್.ರವಿಕುಮಾರ್ ಅವರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಗಳು ಯುವಕರಲ್ಲಿ ಬದುಕಿನ ಜಾಗೃತಿ ಮೂಡಿಸಲು ಸಹಕಾರಿ ಎಂದರು.
ಸೊರಬ ಸಾಹಿತ್ಯ ಪರಿಷತ್ ದತ್ತಿನಿಧಿ ಉಪನ್ಯಾಸ ಹಮ್ಮಿಕೊಳ್ಳುವ ಮೂಲಕ ಜನತೆಯಲ್ಲಿ ವಚನ ಸಾಹಿತ್ಯ ಪಸರಿಸುತ್ತಿದೆ. ಶರಣ ಸಾಹಿತ್ಯ ಪರಿಷತ್ಗೆ ಗರಿಷ್ಠ ಪ್ರಮಾಣದ ನೋಂದಣಿ ಪ್ರಕ್ರಿಯೆ ನಡೆಯಬೇಕಿದೆ. ಅದಕ್ಕೆ ನಮ್ಮ ಸಹಕಾರ ಎಂದಿಗೂ ಇದೆ. ಈ ಬಾರಿಯ ಶರಣ ಸಾಹಿತ್ಯ ಸಮ್ಮೇಳನವನ್ನು ಕಂತನಹಳ್ಳಿಯ ಅಣ್ಣಾಜಿಗೌಡರ ಮನೆಯಲ್ಲಿ ನಡೆಸಲು ತೆಗೆದುಕೊಂಡ ತೀರ್ಮಾನ ಸ್ವಾಗತಾರ್ಹ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಕೀಲ ಎಂ.ಆರ್.ಪಾಟೀಲ್ ಮಾತನಾಡಿ, 12ನೇ ಶತಮಾನದ ಪ್ರವರ್ಧಮಾನದಲ್ಲಿ ವಚನ ಸಾಹಿತ್ಯಗಳು ಜನತೆಯಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ ಮನುಷ್ಯನನ್ನು ಧಾರ್ವಿುಕ ಜೀವನಕ್ಕೆ ಮೈಗೂಡಿಸಿಕೊಳ್ಳುವಂತೆ ಮಾಡಿವೆ ಎಂದರು.
ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಶರಣ ಸಾಹಿತ್ಯ ಚಿಂತನೆ, ಸಂಘಟನೆ ಮತ್ತು ಪ್ರಚಾರ ಕುರಿತು ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಕೃಷ್ಣಾನಂದ ಅಧ್ಯಕ್ಷತೆ ವಹಿಸಿದ್ದರು. ಶಿಕಾರಿಪುರ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಸ್ಥಾನಿಕ್, ಆರ್.ಎಸ್.ಸ್ವಾಮಿ ಶಿವಮೊಗ್ಗ, ತಾಲೂಕು ಕಸಾಪ ಅಧ್ಯಕ್ಷ ಹಾಲೇಶ ನವುಲೆ, ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಾಸೂರು ಸೂರ್ಯನಾರಾಯಣ ಹೆಗಡೆ, ಕೆ.ಈ.ಸುನಂದಾ, ಮೃತ್ಯುಂಜಯ ಗೌಡ, ಜಯಮಾಲಾ ಅಣ್ಣಾಜಿಗೌಡ, ರೇಣುಕಮ್ಮ ಗೌಳಿ, ಸಾಹಿತಿ ರಾಜಶೇಖರ ನೆಗವಾಡಿ, ಪುಟ್ಟಸ್ವಾಮಿ ಗೌಡ, ನೀಲಾಂಬಿಕಾ, ರೂಪಾ ಸಿದ್ಧಲಿಂಗಸ್ವಾಮಿ ಇದ್ದರು. ಇದೇ ವೇಳೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಕೃಷ್ಣಾನಂದ ಅವರನ್ನೇ ಮುಂದುವರಿಸಲು ತೀರ್ವನಿಸಲಾಯಿತು.