

ಸಿರಗುಪ್ಪ: ಬಸವ ತತ್ವದ ವೈಚಾರಿಕ ಚಿಂತನೆಯೊಂದಿಗೆ ಶರಣ ಸಿದ್ದರಾಮೇಶ್ವರ ಅವರು ಉಪದೇಶಿಸಿರುವ ಜ್ಞಾನ, ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನು-ಮನಗಳಲ್ಲಿ ಕ್ರಿಯಾತ್ಮಕವಾಗಿ ಅಳವಡಿಸಿಕೊಳ್ಳಬೇಕೆಂದು ಎಸ್‌ಇಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಂಪಾಪತಿ ಹೇಳಿದರು.
ಪಟ್ಟಣದ ನೇತಾಜಿ ವ್ಯಾಯಾಮ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ನಗರಸಭೆ, ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಜಯಂತಿಗಳು ಜಾತಿಗಳ ಒಗ್ಗಟ್ಟು ತೋರಿಸುವುದಕ್ಕೆ ಸೀಮಿತವಾಗದೆ ಜಾತಿಯೊಳಗಿನ ಬಿಕ್ಕಟ್ಟನ್ನು ನಿವಾರಿಸುವಂತಾಗಬೇಕು.
ನಮ್ಮ ಮನಸ್ಸಿನಲ್ಲಿ ಏನನ್ನು ತುಂಬಿಕೊಂಡಿರುತ್ತೇವೆಯೋ ಅದೇ ನಮ್ಮ ನುಡಿಗಳ ರೂಪದಲ್ಲಿ ವ್ಯಕ್ತವಾಗುತ್ತದೆ. ಅಂತರಂಗ ಶುದ್ಧಿಯಾದಾಗ ನಮ್ಮ ಮಾತುಗಳು ಶುದ್ಧಿಯಾಗುತ್ತವೆ. ನಮ್ಮ ಮಾತುಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವು ಅಥವಾ ಅಸಹನೆ ಉಂಟಾಗಬಾರದು. ನಾವು ಸದಾ ಉತ್ತಮವಾದದ್ದನ್ನೇ ನೋಡಬೇಕು, ಕೇಳಬೇಕು ಮತ್ತು ಅಧ್ಯಯನ ಮಾಡಬೇಕು ಎಂದರು.
ತಹಸಿಲ್ದಾರ್ ಎಚ್.ವಿಶ್ವನಾಥ ಮಾತನಾಡಿ, ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸನ್ಮಾರ್ಗದ ಹಾದಿಯಲ್ಲಿ ಸಾಗುವವನೇ ಸಾಧಕ. ಇದು ನಿಜ ಅರ್ಥದಲ್ಲಿ ಪಾವನ ಎಂದು ಜನಮಾನಸಕ್ಕೆ ಸಿದ್ದರಾಮೇಶ್ವರ ಅವರು ಉಪದೇಶಿಸಿದ್ದಾರೆ ಎಂದು ತಿಳಿಸಿದರು.
ಬಿಇಒ ಗುರಪ್ಪ, ಸಮಾಜ ಕಲ್ಯಾಣಾಧಿಕಾರಿ ಎಂ.ಸಿದ್ದಯ್ಯ, ಸಮಾಜ ಸೇವಕ ಧರಪ್ಪ ನಾಯಕ, ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಅಬ್ದುಲ್ ನಬಿ, ನಿವೃತ್ತ ಮುಖ್ಯಗುರು ಹನುಮಂತಪ್ಪ, ಭೋವಿ ಸಮಾಜದ ಪ್ರಮುಖರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕ್ರೀಡಾಂಗಣದಿಂದ ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಸಿದ್ದರಾಮೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮೂಲಕ ನೇತಾಜಿ ವ್ಯಾಯಾಮ ಶಾಲೆವರೆಗೆ ಮೆರವಣಿಗೆ ನಡೆಯಿತು.