

ಧಾರವಾಡ: ಕಾಯಕಜೀವಿ ಶರಣ ಮಡಿವಾಳ ಮಾಚಿದೇವರು ಶರಣರ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿದ್ದರು. ಬಸವಾದಿ ಶರಣರ ದಾರಿಯಲ್ಲಿ ನಾವೆಲ್ಲರೂ ಒಂದಾಗಿ ಸಾಗಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಾತಿ, ಧರ್ಮಗಳ ಬೆನ್ನು ಬಿದ್ದು ಸಮಾಜದಲ್ಲಿ ಒಡಕು ಉಂಟಾಗುತ್ತಿದೆ. 12ನೇ ಶತಮಾನದ ಶರಣರು ಸಮಾನತೆ ದಾರಿ ತೋರಿದ್ದಾರೆ. ಅವರ ಸಾಮರಸ್ಯದ ಜೀವನ ಇಂದಿನ ಸಮಾಜಕ್ಕೆ ಮಾರ್ಗಸೂಚಿಯಾಗಿದೆ. ಶರಣ ಮಡಿವಾಳ ಮಾಚಿದೇವರು ಬಟ್ಟೆಗಳನ್ನು ತೊಳೆಯುವುದರೊಂದಿಗೆ ವಚನಗಳ ಮೂಲಕ ಜನರ ಮಾನಸಿಕ ಕೊಳೆ ತೊಳೆದು ಸ್ವಚ್ಛಗೊಳಿಸಿದ್ದಾರೆ ಎಂದರು.
ಉಪನ್ಯಾಸಕ ಪ್ರೊ. ವೈ.ಡಿ. ನವಲಗುಂದ ಮಾತನಾಡಿ, ಕಾಯಕದಲ್ಲಿ ನಿರಂತರವಾಗಿ ತೊಡಗಿದಾಗಲೇ ಶರಣರ ತತ್ವಕ್ಕೆ ಗೌರವ ಸಿಗುತ್ತದೆ. ಶರಣರ ನಾಡಿನಲ್ಲಿ ಬಸವವಾದಿ ಪ್ರಮಥರು ಆದರ್ಶ ಬದುಕು ನಡೆಸಿ ಎಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ. ಮಾಚಿದೇವರ ನಿಷ್ಠೆಯ ಬದುಕು ಕಾಯಕಕ್ಕೆ ಅನ್ವರ್ಥಕವಾಗಿದೆ ಎಂದರು.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಮಡಿವಾಳಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ಅನಿತಾ ಚಳಗೇರಿ, ಹಿರಿಯರಾದ ಶಿವಲಿಂಗಪ್ಪ ಮಡಿವಾಳರ, ಪರಶುರಾಮ ಮಡಿವಾಳರ, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.