

ಆನೇಕಲ್: ಶರಣ ಸಾಹಿತ್ಯ ಮನೋವಿಕಾಸದ ಸಾಹಿತ್ಯ, ನೈತಿಕ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಕಾರ್ಯ ಶರಣ ಸಾಹಿತ್ಯದ ಮೂಲಕ ನಡೆದಿದೆ ಎಂದು ಆನೇಕಲ್ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಪ್ರಾಧ್ಯಾಪಕಿ ಡಾ.ಎಂ.ಎಸ್.ಆಶಾದೇವಿ ತಿಳಿಸಿದರು.
ಪಟ್ಟಣದಲ್ಲಿ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಆನೇಕಲ್ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶರಣರ ಕಾಲದಲ್ಲಿ ಸ್ತ್ರೀವಾದಿ ಚಿಂತನೆಗಳಿಗೆ ಹೆಚ್ಚಿನ ಪ್ರೋತ್ಸಾಹ, ಸಮಾನ ಪ್ರಾಶಸ್ತ್ಯ ದೊರೆತಿತ್ತು. ಆತ್ಮಶೋಧ, ಆತ್ಮ ಪರಿವರ್ತನೆ, ಆತ್ಮ ಗೌರವಗಳು ಶರಣ ಮೂಲಮಂತ್ರಗಳಾಗಿದ್ದವು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯದ ಪ್ರಚಾರ, ಪ್ರಸಾರ ವ್ಯಾಪಕವಾಗಬೇಕಾಗಿದೆ ಎಂದರು.
ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಕಾಯಕ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಪರಂಪರೆ ಶರಣ ಪರಂಪರೆಯಾಗಿದೆ. ದಾಸೋಹ, ಸಹಪಂಕ್ತಿ ಭೋಜನದ ಮೂಲಕ ಜಾತ್ಯತೀತ ತತ್ವವನ್ನು ಜನರಿಗೆ ತಲುಪಿಸುವ ಚಳವಳಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಭಾವ-ಲಿಂಗಭಾವ ಎಂಬ ವಚನಗಳ ಪುಸ್ತಕ ಬಿಡುಗಡೆ ಮಾಡಿದರು.
ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ದೊಡ್ಡಮರಳವಾಡಿ ಮಠದ ಶ್ರೀ ಮೃತ್ಯುಂಜಯ ಶ್ರೀಗಳು, ಗುಮ್ಮಳಾಪುರ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಸಂದ್ರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ತಾಲೂಕು ಅಧ್ಯಕ್ಷ ಎಂ.ಶಿವಣ್ಣ, ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ಪುರಸಭಾ ಸದಸ್ಯೆ ಭಾರತಿ ವಿರೂಪಾಕ್ಷಪ್ಪ, ಕಲ್ಲುಬಾಳು ಗ್ರಾಪಂ ಅಧ್ಯಕ್ಷ ಬಸವರಾಜು, ಸಾಹಿತಿ ತಾ.ನಂ.ಕುಮಾರಸ್ವಾಮಿ, ಮುಖಂಡರಾದ ಎಚ್.ಎಸ್.ಬಸವರಾಜು, ಕೆ.ಎಸ್.ನಟರಾಜ್, ಚಿಕ್ಕರೇವಣ್ಣ, ಕಿರಣ್‌ಪ್ರಕಾಶ್, ನೀಲಕಂಠಯ್ಯ, ಹಿನ್ನಕ್ಕಿ ಜಯಣ್ಣ, ಮಹೇಶ್, ಆರ್.ಎಂ.ಚಂದ್ರಶೇಖರ್, ಸನತ್‌ಕುಮಾರ್, ಟಿ.ವಿ.ರಾಜಶೇಖರ್ ಇತರರಿದ್ದರು.
ಶರಣ ಸಾಹಿತ್ಯಕ್ಕೆ ಸ್ಥಳದ ಭರವಸೆ: ಎಲ್ಲ ಜಾತಿಗಳಿಗೂ ಸಮಾನ ಸ್ಥಾನ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಶರಣರಿಗೆ ಸಲ್ಲುತ್ತದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಚಿಂತನೆಗಳನ್ನು 12ನೇ ಶತಮಾನದಲ್ಲಿಯೇ ಅಲ್ಲಮಪ್ರಭು, ಬಸವಣ್ಣನವರು ಸಮರ್ಥವಾಗಿ ರೂಪಿಸಿದರು. ಪ್ರತಿ ವರ್ಷ ಸಮ್ಮೇಳನ ರೂಪಿಸಿ ಚಿಂತನ-ಮಂಥನ ನಡೆಯಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ. ಆನೇಕಲ್‌ನಲ್ಲಿ ಶರಣ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ನಡೆಸಲು ಸ್ಥಳವೊಂದನ್ನು ಗುರುತಿಸಿಕೊಡುವುದಾಗಿ ಶಾಸಕ ಬಿ.ಶಿವಣ್ಣ ಭರವಸೆ ನೀಡಿದರು.