ಶರಣ ಸಂಸ್ಕೃತಿಯಿಂದ ಸುಂದರ ಬದುಕು

6BK1
ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಮಂಗಳವಾರ ಮಕ್ಕಳಿಗಾಗಿ ಆಯೋಜಿಸಿದ್ದ ಶರಣ ಸಂಸ್ಕೃತಿ ಶಿಬಿರವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಡಾ.ಗಂಗಾಂಬಿಕ ಅಕ್ಕ, ಶ್ರೀ ಶಿವಾನಂದ ಸ್ವಾಮೀಜಿ, ಬಸವರಾಜ ಪಾಟೀಲ್ ಸೇಡಂ, ಚನ್ನಬಸವಣ್ಣ ಬಳತೆ ಇತರರಿದ್ದರು.
Published on

ಬಸವಕಲ್ಯಾಣ: ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿಯಿಂದ ಕೂಡಿದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಅನುಭವ ಮಂಟಪದಲ್ಲಿ ಮಂಗಳವಾರ ಮಕ್ಕಳಿಗಾಗಿ ಆಯೋಜಿಸಿದ್ದ ಐದು ದಿನಗಳ ಶರಣ ಸಂಸ್ಕೃತಿ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಣ್ಣನವರು ಕಲಿಸಿದ ಶರಣ ಸಂಸ್ಕೃತಿಯ ಶಿಬಿರದಲ್ಲಿ ನೀವು ಪಾಲ್ಗೊಂಡಿದ್ದೀರಿ. ಶರಣ ಸಂಸ್ಕೃತಿ ಶಿಬಿರ ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ವಿಕಾಸ ಹೊಂದಲು ಬಹಳಷ್ಟು ಸಹಕಾರಿಯಾಗಿದೆ ಎಂದು ಹೇಳಿದರು.

ಐದು ದಿನದ ಶಿಬಿರದಲ್ಲಿ ಶರಣ ಸಂಸ್ಕೃತಿಯ ಕುರಿತು ಹೇಳಿಕೊಡಲಾಗುವುದು. ಈ ಅವಕಾಶವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು. ಶರಣ ಸಂಸ್ಕೃತಿಯ ಬಗ್ಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶರಣರು ನಡೆದಾಡಿದ ಪುಣ್ಯಭೂಮಿ ಕಲ್ಯಾಣ. ಈ ಮಣ್ಣಿನಲ್ಲಿ ಓಡಾಡುತ್ತಿರುವ ನಾವೇ ಧನ್ಯರು. ಈ ಶಿಬಿರದಲ್ಲಿ ಮಕ್ಕಳಿಗಾಗಿ ಅನೇಕ ಪಾಠ ಪ್ರವಚನಗಳನ್ನು ಏರ್ಪಡಿಸಲಾಗಿದೆ. ಮಕ್ಕಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಬೀದರ್ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಡಾ.ಗಂಗಾಂಬಿಕ ಅಕ್ಕ ಮಾತನಾಡಿ, ಸುಸಂಸ್ಕೃತ ಮಾನವ ಸಮಾಜವನ್ನು ಬೆಳೆಸಲು ಇಂತಹ ಶರಣ ಶಂಸ್ಕೃತಿ ಶಿಬಿರಗಳು ಏರ್ಪಡಿಸುವುದು ಅವಶ್ಯಕ. ಇಲ್ಲಿ ಆಯೋಜಿಸಿರುವ ಈ ಮಹತ್ವದ ಶಿಬಿರದ ಉಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.

ಬಸವಗುರು ಪೂಜೆ ನೆರವೇರಿಸಿದ ಬಸವಕಲ್ಯಾಣ ಕ್ಷೇತ್ರ ಸಮಿತಿ ಮುಖ್ಯ ಸಂಚಾಲಕ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮಾತನಾಡಿದರು. ಶಾಸಕ ಶರಣು ಸಲಗರ ಶಿಬಿರವನ್ನು ಉದ್ಘಾಟಿಸಿದರು.

ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಮಹಾಸ್ವಾಮೀಜಿ, ಪೂಜ್ಯ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಭಾಲ್ಕಿಯ ಯುವ ಮುಖಂಡ ಚನ್ನಬಸವಣ್ಣ ಬಳತೆ ಇತರರಿದ್ದರು. ಶ್ರೀ ಬಸವ ದೇವರು ನಿರೂಪಣೆ ಮಾಡಿದರು. ರಂಗ ಕಲಾವಿದೆ ದಿವ್ಯಾಂಜಲಿ ಅವರಿಂದ ವಚನ ಪ್ರಾರ್ಥನೆ ಜರುಗಿತು.

ಪರಮ ಪವಿತ್ರ ನೆಲ ಕಲ್ಯಾಣ. ಜಗತ್ತಿನ ಜನ ಕಲ್ಯಾಣದತ್ತ ಮುಖ ಮಾಡಲಿದ್ದಾರೆ. ಮಕ್ಕಳಲ್ಲಿ ಶರಣ ಸಂಸ್ಕೃತಿಯವನ್ನು ಬೆಳೆಸಿ, ಉತ್ತಮ ನಾಗರಿಕನ್ನಾಗಿ ರೂಪಿಸುವಲ್ಲಿ ಶರಣ ಸಂಸ್ಕೃತಿ ಶಿಬಿರ ಸಹಕಾರಿಯಾಗಲಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಶರಣ ಸಂಸ್ಕೃತಿಯ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

| ಬಸವರಾಜ ಪಾಟೀಲ್ ಸೇಡಂ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net