ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

9 (3)--04
Published on

ಚಿತ್ರದುರ್ಗ: ಮುರುಘಾಮಠದ ಐದು ದಿನಗಳ ಶರಣ ಸಂಸ್ಕೃತಿ ಉತ್ಸವ 2023ಕ್ಕೆ ಬುಧವಾರ ಸಂಜೆ ತೆರೆ ಬಿದ್ದಿತ್ತು. ಸಮಾರೋಪ ಸಮಾರಂಭದಲ್ಲಿ ಮಾ ತನಾಡಿದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ರಾಜ್ಯದ ಶ್ರೇಷ್ಠ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಮುರುಘಾಮಠ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಅನಾದಿ ಕಾಲದಿಂದ, ಅನ್ನ, ಜ್ಞಾನ ದಾಸೋಹಕ್ಕೂ ಒತ್ತು ನೀಡುತ್ತಾ ಬಂದಿದೆ.
ಗುರುಗಳಿಗೆ ನಮಸ್ಕಾರ ಮಾಡುವುದು ಒಂದು ಸಂಸ್ಕಾರ. ಅದನ್ನು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ. ನಮ್ಮ ಭೀಮಸಮುದ್ರ ಕೆರೆಗೆ ನೀರನ್ನು ತುಂಬಿಸಬೇಕೆಂಬ ತಮ್ಮ ತಂದೆಯವರಲ್ಲಿದ್ದ ಒತ್ತಾಸೆಯು ಹಿಂದಿನ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರಲ್ಲೂ ಇತ್ತು ಎಂದು ನೆನಪಿಸಿಕೊಂಡರು.
ಶೂನ್ಯಪೀಠ ಪರಂಪರೆ ವಿಚಾರ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಶರಣರು ಈ ನಾಡಿಗೆ ಶೂನ್ಯ ಸಂಪಾದನೆ, ಶೂನ್ಯ ಪೀಠ ಎಂಬ ಜೀವನ ಸಾಕ್ಷತಕಾರದ ಎರಡು ಪಾರಿಭಾಷಿಕ ಶಬ್ಧಗಳನ್ನು ಕೊಟ್ಟಿದ್ದಾರೆ. ಭಕ್ತಿ, ಕಾಯಕ, ಪ್ರಸಾದ, ವಿಭೂತಿ, ಆತ್ಮ, ಸದ್ಗತಿ, ಆತ್ಮೋದ್ಧಾರ ಮೊದಲಾದ ಪದಗಳಿಗೆ ವಿಶೇಷ ಅರ್ಥ ನೀಡಿದ್ದಾರೆ. ವಚನಗಳು ಮತ್ತು ಶೂನ್ಯಪೀಠ ಜಗತ್ತಿಗೆ ಶರಣರು ನೀಡಿದ ದೊಡ್ಡ ಕೊಡುಗೆ. ಶೂನ್ಯಪೀಠವನ್ನು ಸಾಂಸ್ಕೃತಿಕವಾಗಿಯೂ ನೋಡ ಬೇಕಿದೆ ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ವಚನ ಚಳವಳಿ ಜಗತ್ತಿಗೆ ವೈಚಾರಿಕ ತಳಹದಿಯ ಬದುಕನ್ನು ಕೊಟ್ಟಿದೆ. ವೈಚಾರಿಕತೆ ಎಂಬುದು ಮುರುಗಿ ಶಾಂತವೀರ ಶ್ರೀಗಳ ಕಾಲದಿಂದಲೂ ವಿಸ್ತಾರವಾಗುತ್ತಾ ಬಂದಿದೆ ಎಂದು ಹೇಳಿದರು.
ಇಳಕಲ್ ವಿಜಯಮಹಾಂತೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸಮಾನತೆ, ಶೋಷಿತ ವರ್ಗಗಳ ಅಭಿವೃದ್ಧಿ ನಿರ್ಣಯಗಳನ್ನು ಶೂನ್ಯಪೀಠ ಕಾರ್ಯರೂಪಕ್ಕೆ ತಂದಿದೆ. ಜಾತಿರಹಿತ ಸಮಾಜ ನಿರ್ಮಾಣದ ಉದ್ದೇಶ ಮುರುಘಾಮಠದ್ದಾಗಿದೆ ಎಂದರು.
ಉತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್ ಕೃತಜ್ಞತೆ ಸಲ್ಲಿಸಿದರು. ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿದರು.
ಮಠದ ಉಸ್ತುವಾರಿ ಶ್ರೀ ಬಸವಪ್ರಭುಸ್ವಾಮೀಜಿ, ಆಡಳಿತಾಧಿಕಾರಿ, ನ್ಯಾಯಾಧೀಶೆ ಬಿ.ಎಸ್.ರೇಖಾ, ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ತೊಗರ್ಸಿ ಶ್ರೀ ಮಹಾಂತ ದೇವ ಸ್ವಾಮೀಜಿ, ಶ್ರೀ ವಚನಾನಂದಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಎಸ್.ಜೆ.ಎಂ.ವಿದ್ಯಾಪೀಠದ ಸಿಇಒ ಎಂ.ಭರತ್ ಕುಮಾರ್, ನಿರ್ಮಾಪಕ ಡಾ.ಹರೀಶ್ ಮತ್ತಿತರರು ಇದ್ದರು.
ಗಂಧರ್ವ ಇವೆಂಟ್ಸ್‌ನ ಅನುರಾಧ ಭಟ್ ಅವರು ಸಾಂಸ್ಕೃತಿಕ ಸಂಭ್ರಮ ನಡೆಸಿಕೊಟ್ಟರು. ತೋಟಪ್ಪ ಉತ್ತಂಗಿ ಸಂಗಡಿಗರು ಪ್ರಾರ್ಥಿಸಿದರು. ಎಸ್.ಎಂ.ಎಲ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ಬಸವರಾಜ್ ಹುರಳಿ ನಿರೂಪಿಸಿದರು.

*ಕೋಟ್
ಹದಿನೇಳನೇ ಶತಮಾನದವರೆಗೆ ಸಂಚಾರಿಯಾಗಿದ್ದ ಶೂನ್ಯಪೀಠ ನಂತರ ಮುರುಗಿ ಶಾಂತವೀರ ಸ್ವಾಮೀಜಿ ಅವರಿಂದಾಗಿ ಸ್ಥಾನಿಕ ರೂಪ ಪಡೆಯಿತು. ಶ್ರೀಮಠ ನಮಗೆ ಶಿಸ್ತು ಕಲಿಸಿದೆ.
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ. ಮೈಸೂರಿನ ಸಿದ್ದರಹಳ್ಳಿ ಪರಮಾರ್ಥ ಗವಿಮಠ

(ಸಿಟಿಡಿ 25 ಶರಣ ಸಮಾರೋಪ)
ಚಿತ್ರದುರ್ಗದಲ್ಲಿ ಬುಧವಾರ ಶರಣ ಸಂಸ್ಕೃತಿ ಉತ್ಸವ ಸಮಾರೋಪದಲ್ಲಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿ, ಕಾರ‌್ಯಾಧ್ಯಕ್ಷ ಕೆ.ಸಿ.ನಾಗರಾಜ್ ಅವರನ್ನು ಗೌರವಿಸಲಾಯಿತು. ನ್ಯಾಯಾಧೀಶೆ ಬಿ.ಎಸ್.ರೇಖಾ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ತೋಗರ್ಸಿ ಶ್ರೀ, ಶ್ರೀ, ವಚನಾನಂದ ಸ್ವಾಮೀಜಿ, ಎಂ.ಭರತ್‌ಕುಮಾರ್, ಡಾ.ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net