

ವಿಜಯಪುರ: ಶರಣ ಧರ್ಮ ಸ್ವತಂತ್ರ ಧರ್ಮವಾಗಿದ್ದು, ಅದನ್ನು ಜಾತಿಗೆ ಸೀಮಿತಗೊಳಿಸಿದರೆ ಬಸವಣ್ಣನವರಿಗೆ ಅವಮಾನ ಮಾಡಿದಂತೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಬಿಎಲ್‌ಡಿಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಚಿಂತನ- ಸಾಹಿತ್ಯ ಬಳಗ ಗುರುವಾರ ಆಯೋಜಿಸಿದ್ದ ‘ಡಾ. ಫ.ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ. ಬಿ.ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಸ್ಮರಣೆ’ ಕಾರ್ಯಕ್ರಮದಲ್ಲಿ ‘ವಚನ ಧರ್ಮ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಡಾ. ಫ.ಗು. ಹಳಕಟ್ಟಿ ಅವರು ಕಳೆದು ಹೋಗಿದ್ದ ಜ್ಞಾನ ಸಂಪತ್ತು ವಚನ ಧರ್ಮವನ್ನು ಜಗತ್ತಿಗೆ ತೋರಿಸಿದ ಮಹಾನ್ ಚೇತನ. ಸತ್ಯ, ಶುದ್ಧ, ಕಾಯಕ ಜೀವಿಯಾಗಿದ್ದ ಅವರು, ವಚನಗಳನ್ನು ಸಂರಕ್ಷಿಸಿ ಪ್ರಕಟಿಸುವ ಮೂಲಕ ಜ್ಞಾನ ದಾಸೋಹಿಯಾಗಿದ್ದಾರೆ. ಬಂಥನಾಳ ಸಂಗನಬಸವ ಶಿವಯೋಗಿಗಳ ದೂರದೃಷ್ಟಿಯ ಫಲವಾಗಿ ವಿಜಯಪುರ ಈಗ ವಿದ್ಯಾಕ್ಷೇತ್ರವಾಗಿ ಬೆಳೆಯುತ್ತಿದೆ. ಮಾಜಿ ಸಚಿವ ದಿ. ಬಿ.ಎಂ. ಪಾಟೀಲರು ಸಭ್ಯ, ಪರಿಶುದ್ಧ ರಾಜಕೀಯದ ಜೊತೆಗೆ ವಿಜಯಪುರ ಜಿಲ್ಲೆಯನ್ನು ಶೈಕ್ಷಣಿಕವಾಗಿ ನಾಡಿನಾದ್ಯಂತ ಹೆಸರು ಮಾಡುವ ಕಾಯಕ ಮಾಡಿದ್ದಾರೆ. ಬಂಗಾರಮ್ಮ ಸಜ್ಜನ ಅವರು ಜ್ಞಾನದಾಸೋಹ ಕ್ಷೇತ್ರಕ್ಕೆ ಜಮೀನು ನೀಡುವ ಮೂಲಕ ಪೋಷಿಸಿದ್ದಾರೆ ಎಂದರು.
ಜಗತ್ತಿನ ಎಲ್ಲ ಧರ್ಮಗಳ ಜೊತೆ ತುಲನೆ ಮಾಡಿದಾಗ ಕನ್ನಡಿಗರ ವಚನ ಧರ್ಮದ ಅಸ್ಮಿತೆಯ ಅರಿವಾಗುತ್ತದೆ. ಏಕವ್ಯಕ್ತಿ ಸಾಹಿತ್ಯ ಕ್ರಾಂತಿಗೆ ಕಾರಣಾದರೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿರುವ ಶರಣರ ವಚನ ಸಾಹಿತ್ಯ ಸಾಮಾಜಿಕ ಬದಲಾಣೆಗೆ ಪ್ರೇರಣೆಯಾಗಿವೆ. ಶರಣರ ವಚನಗಳು ಸಂವಾದದ ರೀತಿಯಲ್ಲಿದ್ದು, ಆಯಾ ಸಮುದಾಯಗಳ ಸಮಸ್ಯೆ, ಅವುಗಳಿಗೆ ಪರಿಹಾರ ಮತ್ತು ಸಮೂಹ ಪ್ರಜ್ಞೆಯನ್ನು ವಚನಗಳು ರೂಪಿತವಾಗಿವೆ ಎಂದರು.
12ನೇ ಶತಮಾನದ ಶರಣರ ವಚನಗಳು ವಚನ ಧರ್ಮದ ಗ್ರಂಥಗಳಾಗಿದ್ದು, ನಂತರದ ಹುಟ್ಟಿದ ವಚನಗಳು ಛಾಯಾ ವಚನಗಳಾಗಿವೆ. ವರ್ಣಗಳ ವ್ಯವಸ್ಥೆ ವಿರೋಧಿಸಿ ವಚನಗಳು ಜನ್ಮತಾಳಿವೆ. ಭಾರತದಲ್ಲಿ ಅಸಮಾನತೆ ಮತ್ತು ದಯೆಯಿಲ್ಲದ ಧರ್ಮಗಳ ವಿರುದ್ಧ ಇತರ ಧರ್ಮಗಳು ಹುಟ್ಟಿವೆ. ವೈದಿಕ ಧರ್ಮದಲ್ಲಿರುವ ಅನಿಷ್ಠಗಳನ್ನು ವಿರೋಧಿಸಿ, ಅದರಲ್ಲಿರುವ ಒಳ್ಳೆಯ ಗುಣಗಳ ಜೊತೆಗೆ ಪ್ರಜಾಪ್ರಭುತ್ವಕ್ಕೆ ಪೂರಕವಾದ ಮತ್ತು ದಯೆಯನ್ನು ಮೂಲವಾಗಿಟ್ಟುಕೊಂಡು ವಚನಧರ್ಮ ಜನ್ಮತಾಳಿದೆ. ವಚನಕಾರರು ವೈದಿಕ ಧರ್ಮವನ್ನು ವಿರೋಧಿಸಿದರೆ ಹೊರತು ಉಪನಿಷತ್ತುಗಳನ್ನಲ್ಲ. ಏಕೆಂದರೆ ಅವು ನಿಸರ್ಗದ ವಿಚಾರಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು.
ಚಿತ್ತರಗಿ- ಇಳಕಲ್ಲದ ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮೀಜಿ ಮಾತನಾಡಿ, ಸಂಸಾರ ಬಿಟ್ಟು ಕಾಡಿಗೆ ಹೋಗಿ ದೇವರ ದರ್ಶನ ಮಾಡುವ ಬದಲು ಮನೆಯಲ್ಲಿಯೇ ಕುಳಿತು ಲಿಂಗ ಪೂಜೆಯ ಮೂಲಕ ಏಕಾಗ್ರತೆ ಸಾಧಿಸಿ ದೇವರ ದರ್ಶನ ಪಡೆಯಲು 12ನೇ ಶತಮಾನದಲ್ಲಿ ಬಸವಣ್ಣನವರು ಇಷ್ಟಲಿಂಗ ಪೂಜೆ ಪರಿಕಲ್ಪನೆಯನ್ನು ಜಾರಿಗೆ ತಂದರು. ಈ ಇಷ್ಟಲಿಂಗಕ್ಕೆ ವಿಶ್ವದ ರೂಪ ನೀಡಿದರು. ಈ ಮೂಲಕ ಜನರಲ್ಲಿದ್ದ ದೇವರ ಹಸಿವನ್ನು ನೀಗಿಸಲು ಕಾರಣರಾದರು. ಇಷ್ಟಲಿಂಗ ಪೂಜೆ ಮನುಷ್ಯನಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಚಂಚಲತೆಯನ್ನು ತೊಲಗಿಸಿ ಮನಸ್ಸನ್ನು ನಿಯಂತ್ರಿಸುವುದರಿಂದ ಆ ವ್ಯಕ್ತಿ ಮಹಾನ್ ಆಗಲು ಸಾಧ್ಯವಾಗುತ್ತದೆ. ಜಾತಿಗಿಂತ ಅರಿವಿನಿಂದ ದೊಡ್ಡವನಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಳಕಟ್ಟಿಯವರು ವಚನ ಸಂಗ್ರಹಿಸಿ ಬಸವಣ್ಣನವರನ್ನು ಬದುಕಿಸಿದರು. ಹಳಕಟ್ಟಿಯವರನ್ನು ಎಂ.ಬಿ. ಪಾಟೀಲರು ಶಾಶ್ವತವಾಗಿ ಪರಿಚಯಿಸಿದರು. ಈ ಮೂಲಕ ರಾಜಕೀಯದ ಜೊತೆ ಅವರ ದಾರ್ಶನಿಕ ಕ್ಷೇತ್ರದಲ್ಲಿಯೂ ಅವರು ಪರಿಚಯಿತರಾಗಿದ್ದಾರೆ. ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಮಾಡಿ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಾಲ್ಕು ಜನ ದಾರ್ಶನಿಕರ ಜೊತೆ ಇವರು 5ನೇ ದಾರ್ಶನಿಕರಾಗಿದ್ದಾರೆ ಎಂದು ಹೇಳಿದರು.
ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ. ಬಿಎಲ್‌ಡಿಇ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ನಾಲ್ಕೂ ಜನ ಮಹನೀಯರು ತಮ್ಮ ತನು, ಮನ ಮತ್ತು ಧನದಿಂದ ಮಾಡಿದ ಕಾಯಕವನ್ನು ಉದಾಹರಣೆ ಸಹಿತ ಮನಮುಟ್ಟುವಂತೆ ವಿವರಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಬಿಎಲ್‌ಡಿಇ ಡೀಮ್ಡ್ ವಿವಿಯ ಸಮಕುಲಾಧಿಪತಿ ಡಾ. ಜೈರಾಜ್, ಕುಲಪತಿ ಡಾ. ಆರ್.ಎಸ್. ಮುಧೋಳ, ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ. ಕೊಟ್ನಾಳ, ಅರುಣಕುಮಾರ ಶಹಾ, ಅಶೋಕ ವಾರದ, ನ್ಯಾಯವಾದಿ ಅರವಿಂದ ಹಿರೊಳ್ಳಿ ಮತ್ತಿತರರಿದ್ದರು.
ಬಿ.ಎಂ. ಪಾಟೀಲ ಶಾಲೆಯ ವಿದ್ಯಾರ್ಥಿಗಳು ಸಂಸ್ಥಾಪನೆ ಗೀತೆ ಹಾಡಿದರು. ಮುತ್ತರಾಜ ಮಾದನಭಾವಿ ಮತ್ತು ಸುನಂದಾ ಘಾಟಗೆ ವಚನ ಗಾಯನ ಹೇಳಿದರು. ವಿ.ಡಿ. ಐಹೊಳ್ಳಿ ನಿರೂಪಿಸಿದರು. ಡಾ. ಎ.ಬಿ. ಬೂದಿಹಾಳ ವಂದಿಸಿದರು.