ಶರಣ ಚಳವಳಿ ಮೇಲಿದೆ ಬುದ್ಧ ಧಮ್ಮದ ಪ್ರಭಾವ:  ಪ್ರೊ.ಅರವಿಂದ ಮಾಲಗತ್ತಿ

mysore
Published on

ಮೈಸೂರು: ಹನ್ನೆರಡನೇ ಶತಮಾನದ ಶರಣ ಚಳವಳಿ ಮೇಲೆ ಬುದ್ಧ ಧಮ್ಮದ ಪ್ರಭಾವ ಇದೆ. ಇವುಗಳೆರಡೂ 20ನೇ ಶತಮಾನದಲ್ಲಿ ರಚನೆಯಾದ ಸಂವಿಧಾನಕ್ಕೂ ಸಂವಾದಿಯಾಗಿವೆ ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಶರಣ ಜ್ಯೋತಿ ಪ್ರಸಾರಾಂಗ, ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ಹೊಸಮಠ ಮತ್ತು ಮೈಸೂರು ಆರ್ಟ್ ಗ್ಯಾಲರಿ ಸಹಯೋಗದಲ್ಲಿ ನಟರಾಜ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವೈರಾಗ್ಯನಿಧಿ ಅಲ್ಲಮಪ್ರಭು ಸಚಿತ್ರಕಥಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೌದ್ಧ ಧರ್ಮದ ಪ್ರತೀಕವಾಗಿಯೇ ಶರಣ ಧರ್ಮ ಪ್ರತಿನಿಧಿತ್ವ ವಹಿಸುತ್ತದೆ. ಆರಂಭದಲ್ಲಿ ವಿದ್ವಾಂಸ ಪ್ರೊ.ಎಂ.ಎಂ.ಕಲಬುರ್ಗಿ ಅವರು ಬೌದ್ಧ ಧರ್ಮದ ವಿಚಾರ ಕುರಿತು ಟೀಕೆ ಮಾಡುತ್ತಾರೆ.

ಕೊನೆ ಕೊನೆಯ ಬರಹಗಳಲ್ಲಿ ಬಸವಣ್ಣ ಬುದ್ಧನ ಪ್ರತಿನಿಧಿತ್ವ ವಹಿಸುತ್ತಾನೆ ಎಂದಿದ್ದಾರೆ. ಬುದ್ಧ ಮತ್ತು ಶರಣರು ಏಕೋಭಾವನೆಯಿಂದ ಚಿಂತನೆ ನಡೆಸದೆ ವಾಸ್ತವತೆಗೆ ಪ್ರಾಧ್ಯಾನತೆ ಕೊಡುವುದರಲ್ಲಿ ಸಾಮ್ಯತೆ ಇದೆ ಎಂದು ಹೇಳಿದರು.

ಬಸವಣ್ಣ ಯಥಾವತ್ತಾಗಿ ಬುದ್ಧನ ತತ್ವವನ್ನು ತರದೇ ಹೊಸ ವಿಚಾರವನ್ನು ಬೆಳೆಸಿದ್ದಾರೆ. ಬಸವಣ್ಣ ಬುದ್ಧನ ಮೀರಿ ಹೇಳಿದ ತತ್ವಗಳು ಕಾಯಕ, ದಾಸೋಹವಾಗಿದೆ. ಕಾಮ-ದೇಹ, ಹುಟ್ಟು-ಸಾವು ಕುರಿತು ಆದಿ ಚಿಂತನೆಯಿಂದ ಈಗಿನ ತನಕವೂ ಜಿಜ್ಞಾಸೆ ನಡೆದಿದೆ. ಶರಣ ಚಳವಳಿಯ ಅಲ್ಲಮಪ್ರಭು ಮುಕ್ತಾಯಕ್ಕ, ಅಕ್ಕ ಮಹಾದೇವಿ, ಬೌದ್ಧ ಅನುಯಾಯಿಗಳಾದ ಪಸೇನದಿ, ಕೇಮ, ಸೋಮ ಮುಂತಾದವರ ಚರ್ಚೆಗಳಲ್ಲಿ ಸಾಮ್ಯತೆ ಇದೆ ಎಂದು ತಿಳಿಸಿದರು.

ನಡೆದಾಡುವ ಶವದಂತಿದ್ದ ಶೂದ್ರ ವರ್ಗಕ್ಕೆ ಜೀವ ತುಂಬುವ ಕೆಲಸವನ್ನು ಶರಣ ಚಳವಳಿ ಮಾಡಿತು. ಶೂನ್ಯ ಸಿಂಹಾಸನದ ಮೇಲೆ ಕುಳಿತ ಅಲ್ಲಮಪ್ರಭುಗಳು ವರ್ತಮಾನದ ಸಮಸ್ಯೆಗಳ ಬಗೆಹರಿಸುವ ಸಾಮರ್ಥ್ಯ ಇತ್ತು ಎಂದು ಬಸವಣ್ಣ ಹೇಳಿದ್ದಾರೆ ಎಂದರು.

ಶರಣ ಚಳವಳಿಯಲ್ಲಿ ಪ್ರಭುದೇವರೆ ಪ್ರಧಾನ. ಕನ್ನಡಕೊಬ್ಬರೇ ಅಲ್ಲಮ. ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಅತ್ಯಂತ ದೊಡ್ಡದು. ಬೆಡಗಿನ ವಚನಗಳು ಕನ್ನಡದ ಭಾಷಾ ಶ್ರೀಮಂತಿಕೆ, ಸತ್ವ ಬಿಡಿಸಿ ತೋರಿಸಿದ ಮೊದಲಿಗ. ಬಸವಣ್ಣನದು ಭಕ್ತಿ ಮಾರ್ಗವಾದರೆ ಅಲ್ಲಮಪ್ರಭು ಅವರದು ಜ್ಞಾನ ಮಾರ್ಗ ಎಂದು ಹೇಳಿದರು.

ಎಲ್.ಶಿವಲಿಂಗಪ್ಪ ದ್ವಿಭಾಷಿ ಲೇಖಕರು. ಬಾಲಕರಿಂದ ವಯಸ್ಕರು ಓದುವಂತೆ ಅಲ್ಲಮಪ್ರಭುಗಳ ಬಗ್ಗೆ ಬರೆದಿದ್ದಾರೆ. ವಿದ್ವತ್ ಕೃತಿಯಲ್ಲದೆ ಮಧ್ಯಂತರ ಸ್ವರೂಪದ ಕೃತಿಯಾಗಿದೆ. ಚಾಮರಸ, ಹರಿಹರ, ಶೂನ್ಯ ಸಂಪಾದನೆಗಳ ಕೃತಿಗಳನ್ನು ಅಧ್ಯಯನ ಮಾಡಿಯೂ ಪವಾಡಾತ್ಮಕ ಸಂಗತಿಗಳನ್ನು ಕಳಚಿ ವಾಸ್ತವ ಸಂಗತಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಚಿದಾನಂದ ಸ್ವಾಮೀಜಿ 75ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಅಂತರ ಶಾಲಾ ವರ್ಣವಿನ್ಯಾಸ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತ ಅಂಶಿಪ್ರಸನ್ನಕುಮಾರ್, ಲೇಖಕ ಎಲ್.ಶಿವಲಿಂಗಪ್ಪ, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಡಾ.ಜಮುನಾರಾಣಿ ಮಿರ್ಲೆ, ಪ್ರಾಂಶುಪಾಲೆ ವಿ.ಡಿ.ಸುನೀತಾರಾಣಿ ಇದ್ದರು. ಚೂಡಾಮಣಿ ವಚನ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net