ಶಮಂತನ ಕುಟುಂಬಸ್ಥರಿಗೆ ಶಾಸಕಿ ಸಾಂತ್ವನ

kls mla
ಕಳಸದ ಗಣಪತಿಕಟ್ಟೆ ಸಮೀಪ ಶಮಂತನ ಮನೆಗೆ ನಯನಾ ಮೋಟಮ್ಮ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Published on

ಕಳಸ: ಕೊಳಮಗೆಯಲ್ಲಿ ಭದ್ರಾ ನದಿಗೆ ಪಿಕ್‌ಅಪ್ ವಾಹನ ಬಿದ್ದು ಕಣ್ಮರೆಯಾದ ಶಮಂತ ಮತ್ತು ಮಗನ ಕಣ್ಮರೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಆತನ ತಾಯಿ ರವಿಕಲಾ ಅವರ ಮನೆಗೆ ಶಾಸಕಿ ನಯನಾ ಮೋಟಮ್ಮ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗಣಪತಿಕಟ್ಟೆ ಸಮೀಪದ ಶಮಂತನ ಮನೆಗೆ ನಯನಾ ಮೋಟಮ್ಮ ಭೇಟಿ ನೀಡಿದಾಗ ಆತನ ತಂದೆ ರಮೇಶ್, ಅಣ್ಣ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟರು. ಶಮಂತ ಹಾಗೂ ಆತನ ತಾಯಿ ರವಿಕಲಾ ಸಾವಿನಿಂದ ಮನೆಯ ಭವಿಷ್ಯವೇ ಕಮರಿತು ಎಂದು ರಮೇಶ್ ನೋವು ತೋಡಿಕೊಂಡರು. ನಾವು ಇದೇ ಸ್ಥಳದಲ್ಲಿ ತಲೆತಲಾಂತರದಿಂದ ವಾಸವಾಗಿದ್ದೇವೆ. ಆದ್ದರಿಂದ ನಮ್ಮ ಜಮೀನಿಗೆ ಹಕ್ಕುಪತ್ರ ಕೊಡಬೇಕು. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಅನೇಕ ವರ್ಷಗಳಿಂದ ಪ್ರಯತ್ನ ನಡೆದಿದೆ ಎಂದು ಶಾಸಕಿಯ ಬಳಿ ಅಲವತ್ತುಕೊಂಡರು.

ಶಮಂತ ವಾಸವಿದ್ದ ಜಾಗದ ಸ್ವರೂಪ ಮತ್ತು ಮಾಲೀಕತ್ವದ ಮಾಹಿತಿ ಪಡೆದುಕೊಳ್ಳುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಕಾವ್ಯಾ ಅವರಿಗೆ ಶಾಸಕಿ ಸೂಚಿಸಿದರು. ಶಮಂತ ಪತ್ತೆಯಾದ ನಂತರ ಮನೆಯ ಇತರ ಸಮಸ್ಯೆ ಬಗ್ಗೆ ಗಮನಹರಿಸೋಣ ಎಂದು ಶಾಸಕಿ ಸಮಾಧಾನಪಡಿಸಿದರು.

ನಂತರ ಹಳುವಳ್ಳಿ ಮತ್ತು ಬಾಳೆಹೊಳೆ ಬಳಿ ಎನ್‌ಡಿಆರ್‌ಎ್ನಿಂದ ಶಮಂತನಿಗಾಗಿ ನಡೆಯುತ್ತಿರುವ ಶೋಧ ಕಾರ್ಯವನ್ನು ವೀಕ್ಷಿಸಿದರು. ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ರಾಜೇಂದ್ರ ಹೆಬ್ಬಾರ್, ವಿಶ್ವನಾಥ್, ಶ್ರೇಣಿಕ, ರಫೀಕ್, ವೀರೇಂದ್ರ, ಕೆ.ಸಿ. ಮಹೇಶ್ ಇದ್ದರು.

ಕಳಸ ಆಸುಪಾಸಿನ ಭದ್ರಾ ನದಿಯಲ್ಲಿ ಅಗ್ನಿಶಾಮಕ ದಳ, ಬಾಳೆಹೊಳೆ ಮತ್ತು ಹಳುವಳ್ಳಿ ಆಸುಪಾಸಿನಲ್ಲಿ ಎನ್‌ಡಿಆರ್‌ಎ್ ತಂಡ ದಿನಿವಿಡೀ ಶಮಂತನಿಗಾಗಿ ಹುಡುಕಾಟ ನಡೆಸಿದಾದರೂ ಪತ್ತೆಯಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net