ಶಬರಿಮಲೆ ಯಾತ್ರಾರ್ಥಿಗಳ ಸೌಲಭ್ಯಕ್ಕೆ ಆದ್ಯತೆ

Dwajarohana
Published on

ಚಿತ್ರದುರ್ಗ: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ದೇಶದ ವಿವಿಧ ರಾಜ್ಯಗಳಿಂದ 5 ಕೋಟಿಗೂ ಹೆಚ್ಚು ಮಾಲಾಧಾರಿಗಳು, ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದು, ಕರ್ನಾಟಕ ಮಾರ್ಗವಾಗಿ ಸಂಚರಿಸುವವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಬರಿಮಲೆ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ರಾಜ್ಯಾಧ್ಯಕ್ಷ ಡಾ.ಎನ್.ಜಯರಾಮ್ ಭರವಸೆ ನೀಡಿದರು.

ಕೋಟೆನಗರಿ ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಿ ಆವರಣದಲ್ಲಿ ಭಾನುವಾರ ಸಾಸ್‌ನಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚಿಂತನ ಬೈಠಕ್ ಉದ್ಘಾಟಿಸಿ ಮಾತನಾಡಿದರು.

ಸಾಸ್‌ನಿಂದ ಸನ್ನಿಧಾನಕ್ಕೂ ಮುನ್ನ ಮಾಲಾಧಾರಿಗಳು, ಯಾತ್ರಾರ್ಥಿಗಳಿಗಾಗಿ ಹಲವೆಡೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ಗುಂಡ್ಲುಪೇಟೆ, ಹುಳಿಯಾರು ಸೇರಿ ಹಲವೆಡೆ ಕೂಡ ಇದನ್ನು ಜಾರಿಗೊಳಿಸಲು ಚಿಂತಿಸಲಾಗಿದೆ. ಜೊತೆಗೆ ಕುಡಿಯಲು ವಿವಿಧೆಡೆ ಬಿಸಿನೀರಿನ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು.

ನಮ್ಮದು ರಾಷ್ಟ್ರೀಯ ಮಟ್ಟದ ಸಂಘಟನೆಯಾಗಿದ್ದು, ಪ್ರಸ್ತುತ ದೇಶಾದ್ಯಂತ ಲಕ್ಷಾಂತರ ಸದಸ್ಯರಿದ್ದಾರೆ. ಪ್ರತಿ ಹಳ್ಳಿಯಲ್ಲೂ ಸಂಖ್ಯೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಸಾಸ್‌ನ ಜಿಲ್ಲಾಧ್ಯಕ್ಷ ಶರಣ್‌ಕುಮಾರ್ ಶೆಟ್ಟಿ ಮಾತನಾಡಿ, ಶಬರಿಮಲೆ ಯಾತ್ರೆ ವೇಳೆ ಮಾಲಾಧಾರಿಗಳಿಗೆ ಅಪಘಾತ ಸೇರಿ ಏನಾದರೂ ಸಮಸ್ಯೆ ಉಂಟಾದರೆ ಸೇವಾ ಸಮಾಜಂ ತಕ್ಷಣ ಸ್ಪಂದಿಸಲಿದೆ. ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿದೆ. ರಾಜ್ಯದಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದರು.

ಬೆಂಗಳೂರು, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕು ಸೇರಿ ರಾಜ್ಯದ ವಿವಿಧ ಭಾಗಗಳ ಕಾರ್ಯಕರ್ತರು ಬೈಠಕ್‌ನಲ್ಲಿದ್ದರು.

ಸಾಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್ ಎನ್ ರಾಜನ್, ರಾಜ್ಯ ಗೌರವಾಧ್ಯಕ್ಷ ಆನಂದ ವಾಮನನಾಯಕ್, ಉಪಾಧ್ಯಕ್ಷ ಸಂಪತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಸಿ.ಜೈ ಪ್ರಕಾಶ್, ಅನ್ನದಾನ ಕಮಿಟಿ ಅಧ್ಯಕ್ಷ ವಿ.ಕೃಷ್ಣಪ್ಪ, ದಕ್ಷಿಣ ಮಧ್ಯ ಪ್ರಾಂತಿಯ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ಪದಾಧಿಕಾರಿಗಳಾದ ದತ್ತು ಶಿಂತ್ರೆ, ಸೂರ್ಯನಾರಾಯಣ ರಾವ್, ವಸಂತಕುಮಾರ್, ವೆಂಕಟೇಶ್, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net