

ಆಲೂರು: ತಾಲೂಕಿನ ಪಾಳ್ಯ ಹೋಬಳಿಯ ಚಿಕ್ಕಕಣಗಾಲು ಗ್ರಾಮದಲ್ಲಿ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ ಗ್ರಾಮಸ್ಥರ ಹಾಗೂ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಚಿಕ್ಕಕಣಗಾಲು ಗ್ರಾಮದ ಶ್ರೀ ಶನೈಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀ ಲಿಂಗರಾಜ (ಪಾಪಯ್ಯ) ಇವರ ನೇತೃತ್ವದಲ್ಲಿ ಜೆ. ತಿಮ್ಮನಹಳ್ಳಿ ಗ್ರಾಮದ ಯಗಚಿ ನದಿ ದಂಡೆಯಲ್ಲಿ ಗಂಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಮುಖ್ಯ ಬೀದಿಯಲ್ಲಿ ದೇವರ ಅಡ್ಡೆ ಹೊತ್ತು ಚಿಕ್ಕಕಣಗಾಲು ಗ್ರಾಮದಲ್ಲಿರುವ ದೇವಾಲಯಕ್ಕೆ ತರಲಾಯಿತು. ಜಾತ್ರೆಯಲ್ಲಿ ಗ್ರಾಮೀಣ ಕಳೆ ಮನೆ ಮಾಡಿತ್ತು. ದೇವರಿಗೆ ಆರತಿ ಸೇವೆ ನೆರವೇರಿಸಲಾಯಿತು. ಚಿಕ್ಕಕಣಗಾಲು, ಜೆ.ತಿಮ್ಮನಹಳ್ಳಿ ಜನ್ನಾಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡು ಜಾತ್ರೆ ಸೊಬಗು ಹೆಚ್ಚಿಸಿದರು.
ಜಾತ್ರಾ ಮಹೋತ್ಸವ ಪ್ರಯುಕ್ತ ಸ್ಥಳೀಯ ಕಲಾವಿದರಿಂದ ಹರಿಕಥೆ ಏರ್ಪಡಿಸಲಾಗಿತ್ತು. ಜಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.