ಶನೇಶ್ಚರ ಬ್ರಹ್ಮರಥೋತ್ಸವ ಸಂಪನ್ನ ; ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು

16TMK_Degula_Dharshan1 1a
Published on

ಪಾವಗಡ : ಪಟ್ಟಣದ ಜ್ಯೇಷ್ಠಾ ದೇವಿ ಸಹಿತ ಶ್ರೀಶನೇಶ್ಚರಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. 68ನೇ ಬ್ರಹ್ಮ ರಥೋತ್ಸವದ ಅಂಗವಾಗಿ ಸೋಮವಾರ, ಮಂಗಳವಾರ ಶ್ರೀಶನೇಶ್ಚರ ಕಲ್ಯಾಣೋತ್ಸವ, ಕಲಶ ಸ್ಥಾಪನೆ, ಮಹಾ ಮಂಗಳಾರತಿ, ಚಂಡಿಕಾಹೋಮ, ನವಗ್ರಹ ಹೋಮ, ಮೂಲ ಮಂತ್ರ ಹೋಮ ಇನ್ನಿತರ ಪೂಜಾ ಕೈಂಕರ್ಯಗಳು ಸಾಗಿದವು.

ಬೆಳಗ್ಗೆ ಮಹಾ ಮಂಗಳಾರತಿ ನಂತರ ವಾದ್ಯಗೋಷ್ಠಿಯೊಂದಿಗೆ ಉತ್ಸವ ಮೂರ್ತಿಗಳನ್ನು ಕರೆತಂದು ಹೂಗಳಿಂದ ಅಲಂಕಾರಗೊಂಡಿದ್ದ ಬ್ರಹ್ಮರಥದಲ್ಲಿ ಸ್ಥಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.

ಭಕ್ತರ ಇಷ್ಟಾರ್ಥ ಈಡೇರಿಸುವ ಶನೇಶ್ಚರ : ತಾಲೂಕು ಕೇಂದ್ರದಲ್ಲಿರುವ ಶನೇಶ್ಚರ ದೇವಾಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಕೇಂದ್ರವೂ ಆಗಿದೆ. ಈ ಐತಿಹಾಸಿಕ ದೇವಾಲಯ 1955ರಲ್ಲಿ ನಿರ್ಮಾಣಗೊಂಡಿದ್ದು, ಅನೇಕ ಕಲಾತ್ಮಕ ಚಿತ್ರಗಳನ್ನೊಳಗೊಂಡಿದೆ. ದೇವಾಲಯದ ಹೆಬ್ಬಾಗಿಲಿನ ಮೇಲೆ ಸಪ್ತಾಶ್ವರೂಢನಾದ ಸೂರ್ಯನ ಚಿತ್ರವಿದೆ. ಒಳಗೋಡೆಗಳಲ್ಲಿ ದೊಡ್ಡದೊಡ್ಡ ಗೂಡುಗಳನ್ನು ನಿರ್ಮಿಸಿ ದೇವಾನುದೇವತೆಗಳನ್ನು ಪ್ರತಿಷ್ಠಾಪಿಸಲಾಗಿದೆ.

ಕಂಬಗಳಿಗೂ ಅಲಂಕಾರ ನೀಡಿ ಶಿಲಾಬಾಲಿಕೆಯರನ್ನು ಕೆತ್ತಲಾಗಿದೆ, ಹೀಗೆ ದೇವಾಲಯದ ಒಳಗೂ ಕಲಾವಂತಿಕೆಯು ಶೋಭಿಸುತ್ತಿದೆ. ಗರ್ಭಗೃಹದ ವೇದಿಕೆಯಲ್ಲಿ ನವಗ್ರಹಗಳನ್ನು ಸ್ಥಾಪಿಸಿದ್ದು, ಮುಂಭಾಗದಲ್ಲಿ ಶನೇಶ್ಚರ ವಿಗ್ರಹವಿದೆ. ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಕೀರ್ಣವೂ ನಾಗರಕಟ್ಟೆ ವೃತ್ತದ ಸಮೀಪವಿದೆ, ಇಲ್ಲಿಂದ ಮುಂದಕ್ಕೆ ದೇವಾಲಯಗಳ ಸಾಲೇ ಇದ್ದು, ಮೊದಲು ತಿರುಪತಿ ತಿಮ್ಮಪ್ಪ, ಅನಂತರದಲ್ಲಿ ಕೋದಂಡಸ್ವಾಮಿ, ಮಹಾಗಣಪತಿ ನೀಲಕಂಠೇಶ್ವರ ಮೊದಲಾದ ದೇವಾಲಯಗಳಿವೆ. ವೇಣುಗೋಪಾಲಸ್ವಾಮಿ ದೇವಾಲಯ ಸ್ಥಳೀಯ ಸಾಮಂತ ಮನೆತನದ ಆರಾಧ್ಯ ದೈವವಾಗಿತ್ತೆಂದು ತಿಳಿದು ಬರುತ್ತದೆ. ಇವುಗಳೇ ಅಲ್ಲದೇ ಶ್ರೀಸಿದ್ದೇಶ್ವರ ದೇವಾಲಯ, ನವಗ್ರಹವನ, ಶ್ರೀರಾಘವೇಂದ್ರಸ್ವಾಮಿ ದೇವಾಲಯ, ಶ್ರೀರಾಮಕೃಷ್ಣ ಸೇವಾಶ್ರಮದ ಧ್ಯಾನಮಂದಿರ, ಬನಶಂಕರಿ ದೇವಾಲಯ, ಚೌಡೇಶ್ವರಿ ದೇವಾಲಯ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ.

ತಲುಪುವುದು ಹೇಗೆ?: ಪಾವಗಡ ತಾಲೂಕು ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರ ತುಮಕೂರಿನಿಂದ 70ಕಿಮೀ ಅಂತರದಲ್ಲಿದೆ. ತಾಲೂಕು ಕೇಂದ್ರದಲ್ಲಿಯೇ ಈ ಐತಿಹಾಸಿಕ ದೇವಾಲಯವಿದ್ದು ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವಿದೆ.

ಸೌಭಾಗ್ಯ ನೀಡುವ ಸೀತಲಾಂಬಿಕೆ ; ಶನಿದೇವರ ದೇವಾಲಯದಲ್ಲಿ 400 ವರ್ಷದ ಹಿಂದೆಯೇ ಪ್ರತಿಷ್ಠಾಪನೆಯಾಗಿರುವ ‘ಸೀತಲಾಂಬಿಕೆ’ ಸಕಲ ಸೌಭಾಗ್ಯ ನೀಡುವ ದೇವಿ ಎಂದೇ ಖ್ಯಾತಿಗಳಿಸಿದೆ. ಸಂತಾನ ಭಾಗ್ಯ, ವಿವಾಹ ಸೌಭಾಗ್ಯ, ವ್ಯಾಪಾರದಲ್ಲಿ ಲಾಭ, ಆರೋಗ್ಯ, ರಾಜಕೀಯ ಮತ್ತಿತರರ ಸೌಭಾಗ್ಯಗಳನ್ನು ಕರುಣಿಸುವ ದೇವರಾಗಿದೆ.

19ಕ್ಕೆ ಅಡ್ಡ ಪಲ್ಲಕ್ಕಿ ಉತ್ಸವ : ಫೆ.17 ರಂದು ಬಹಳ ಇದ್ಯಮಿ ಮಹಾನ್ಯಾಸ ಪೂರ್ವಕ ಏಕಾದಶಾವತಾರ ರುದ್ರಾಭಿಷೇಕ, ಗಣಹೋಮ, 18ರಂದು ಸಂಜೆ ಆವಶ್ಯಕ ಸ್ನಾನ, ವಸಂತೋತ್ಸವ, ಮಹಾಮಂಗಳಾರತಿ, 19ರಂದು ಶ್ರೀಶನಿಮಹಾತ್ಮ ಸ್ವಾಮಿಯ ಅಡ್ಡ ಪಲ್ಲಕ್ಕಿ ರಥೋತ್ಸವ ನಡೆಯಲಿದೆ.

್ಖ ಶನಿಮಹಾತ್ಮ ದೇವಾಲಯದಲ್ಲಿ ಸಾವಿರಾರು ಭಕ್ತರು ಪ್ರತಿನಿತ್ಯ ಬಂದು ಕಷ್ಟಗಳನ್ನು ಪರಿಹರಿಸಿ ಕೊಳ್ಳುತ್ತಾರೆ, ದೇವರ ಮೇಲೆ ನಂಬಿಕೆಯಿಂದ ಜನರಿಗೆ ಒಳಿತಾಗುತ್ತಿದೆ. ಸತ್ಯನಾರಾಯಣ ಶಾಸ್ತ್ರಿ ಪ್ರಧಾನ ಅರ್ಚಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net