

ಶನಿವಾರಸಂತೆ: ಶನಿವಾರಸಂತೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಒಟ್ಟಾರೆ ಕೊಡಗಿನಲ್ಲಿ ಒಂದು ವಾರದಿಂದ ಬಾರಿ ಮಳೆಯಾಗುತ್ತಿದೆ.
ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಕೊಡ್ಲಿಪೇಟೆ, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುತ್ತಿದೆ ಎರಡು ದಿನಗಳಿಂದ ಗಾಳಿ ಸಮೇತ ತುಂತುರು ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆಯಿಂದ ನಿರಂತರ ಜಿಟಿಜಿಟಿ ಮಳೆಯಾಗುತ್ತಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆ ಬೀಳುತ್ತಿರುವುದು ರೈತರ ಕೃಷಿ ಚಟುವಟಿಕೆಗೆ ಅಡಚಣೆಯಾಗುತ್ತಿದೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗಿನ ಮುಂಗಾರು ಮಳೆ ಪ್ರಮಾಣ ಹೋಲಿಕೆ ಮಾಡಿದಾಗ ಕಳೆದ ವರ್ಷಕಿಂತ ಈ ವರ್ಷ ಮಳೆ ಪ್ರಮಾಣ ತೀರಾ ಕಮ್ಮಿಯಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲೇ ಮಳೆಯಾಗಿತ್ತು. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಒಂದೆರೆಡು ದಿನ ಮುಂಗಾರು ಮಳೆಯಾಗಿದೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಈ ವರ್ಷ ಮೇ 25ಕ್ಕೆ ಸರಾಸರಿ 214.25 ಮಿ.ಮಿ, 8.57 ಇಂಚು ಮಳೆಯಾಗಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ಸರಾಸರಿ 28 ಮಿ.ಮಿ, 1.12 ಇಂಚು ಮಳೆಯಾಗಿದೆ. ಆದರೆ ಕಳೆದ ವರ್ಷ ಇದೆ ಅವಧಿಗೆ ಸರಾಸರಿ 501.25 ಮಿ.ಮಿ, 20.05 ಇಂಚು ಮಳೆಯಾಗಿತ್ತು.