ಶತಮಾನದ ತೊಗಲುಗೊಂಬೆಯಾಟ ಅಳಿವಿನತ್ತ

thogalu_sanmana_sept._20._23.111
ಆಲೂರಿನ ವಿನಾಯಕ ಬಳಗದ ವತಿಯಿಂದ ತೊಗಲುಗೊಂಬೆ ಕಲಾವಿದರಾದ ಗುಂಡೂರಾಜ್, ಕೆ.ಎನ್.ರಘು, ಶಾಂತಣ್ಣ, ಎಸ್.ನಾಗರಾಜು ಮತ್ತು ಪ್ರಭಾವತಿ ಅವರನ್ನು ಸನ್ಮಾನಿಸಲಾಯಿತು.
Published on

ಆಲೂರು: ದಶಕಗಳ ಹಿಂದೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ ನಡೆಯುತ್ತಿತ್ತು. ಈಗ ಅದು ಕ್ಷೀಣಿಸುತ್ತಿದೆ. ವಂಶಪಾರಂಪರ್ಯವಾಗಿ ಬಂದಿರುವ ಈ ಕಲೆಯನ್ನು ಉಳಿಸುವ ಮೊದಲ ಯತ್ನವಾಗಿ ನಾವು ತಂಡ ರಚಿಸಿಕೊಂಡು ಪ್ರದರ್ಶನ ನೀಡುತ್ತಿದ್ದೇವೆ. ಯುವಕರು ಈ ಕಲೆಯತ್ತ ಗಮನಹರಿಸಿದರೆ ಗತಕಾಲದ ವೈಭವವನ್ನು ತೆರೆಯ ಮೇಲೆ ತರಲು ಸಾಧ್ಯ ಎಂದು ಅಂತಾರಾಷ್ಟ್ರೀಯ ತೊಗಲು ಗೊಂಬೆ ಕಲಾವಿದ ಹೂವಿನಹಳ್ಳಿ ಗುಂಡೂರಾಜ್ ತಿಳಿಸಿದರು.

ಪಟ್ಟಣದ ಕೆಇಬಿ ವೃತ್ತದಲ್ಲಿ ಶ್ರೀ ವಿನಾಯಕ ಬಳಗದ ವತಿಯಿಂದ ಪ್ರತಿಷ್ಠಾಪಿಸಲಿರುವ ಗಣಪತಿ ಪೆಂಡಾಲಿನಲ್ಲಿ ಶ್ರೀ ಮಂಜುನಾಥ ತೊಗಲುಗೊಂಬೆ ಮೇಳ ತಂಡದ ವತಿಯಿಂದ ಮಂಗಳವಾರ ಆಯೋಜಿಸಿದ್ದ ತೊಗಲುಗೊಂಬೆ ಪ್ರದರ್ಶನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, 3,500 ವರ್ಷಗಳ ಇತಿಹಾಸವುಳ್ಳ ತೊಗಲುಗೊಂಬೆ ಜಾನಪದ ಕಲೆಯನ್ನು ಉಳಿಸಲು ಸಾರ್ವಜನಿಕರು ಮುಂದಾಗಬೇಕು ಎಂದರು.

ಹಲವು ತಲೆಮಾರಿನಲ್ಲಿ ಹುಟ್ಟಿ ಬಂದಿರುವ ಈ ಕಲೆಯನ್ನು ಹೊರ ದೇಶಗಳಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ, ಕಲಿಯಲು ಆಸಕ್ತರಾಗಿದ್ದಾರೆ. ಇತ್ತೀಚೆಗೆ ವೈಜ್ಞಾನಿಕವಾಗಿ ವೇಗವಾಗಿ ಬೆಳೆಯುತ್ತಿರುವ ಕಾಲದಲ್ಲಿ ಹಲವು ಪುರಾತನ ಕಲೆಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಕೆಲ ದಶಕಗಳ ಹಿಂದೆ ಪ್ರತಿಯೊಂದು ಗ್ರಾಮದಲ್ಲಿ ಕಷ್ಟ ನಿವಾರಣೆಯಾಗಿ ಸುಖ, ಸಮೃದ್ಧಿಯಾಗಲೆಂದು ತೊಗಲುಗೊಂಬೆ ನಾಟಕವನ್ನು ಕಡ್ಡಾಯವಾಗಿ ಪ್ರತಿವರ್ಷ ಪ್ರದರ್ಶಿಸಲಾಗುತ್ತಿತ್ತು ಎಂದು ಸ್ಮರಿಸಿದರು.
ಹಾಂಕಾಂಗ್, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಫ್ರಾನ್ಸ್, ಪೋಲೆಂಡ್, ಕೀನ್ಯ, ಇಥಿಯೋಪಿಯಾ ಮತ್ತು ಅಮೆರಿಕದಲ್ಲಿರುವ ಭಾರತೀಯರು ವೈಯಕ್ತಿಕವಾಗಿ ನಮ್ಮನ್ನು ಕರೆಸಿ ನಾಟಕ ಪ್ರದರ್ಶನ ಮಾಡಲು ಸಹಕರಿಸಿದ್ದಾರೆ. ಇದು ಭಾರತೀಯ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕಲೆಯಾಗಿದೆ. ರಾಮಾಯಣ, ಮಹಾಭಾರತ ಕಥೆಯ ಹಲವು ಪ್ರಸಂಗಗಳನ್ನು ತೊಗಲುಗೊಂಬೆ ಆಟದ ಮೂಲಕ ಪ್ರದರ್ಶಿಲಾಗುವುದು. ಸರ್ಕಾರ ಪ್ರೋತ್ಸಾಹಿಸಿದರೂ ಕಲೆ ಅಳಿವು, ಉಳಿವು ಜನರ ಬೆಂಬಲದ ಮೇಲೆ ನಿಂತಿದೆ ಎಂದರು.

ತೊಗಲುಗೊಂಬೆ ಕಲಾವಿದರಾದ ಕೆ.ಎನ್.ರಘು, ಶಾಂತಣ್ಣ, ಎಸ್.ನಾಗರಾಜು ಮತ್ತು ಪ್ರಭಾವತಿ ಅವರನ್ನು ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಕರವೇ ತಾಲೂಕು ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಶ್ರೀ ವಿನಾಯಕ ಗೆಳೆಯರ ಬಳಗದ ಸಂಘಟನಾ ಅಧ್ಯಕ್ಷ ಟಿ.ಆರ್.ಆನಂದ್, ಭರತ್, ಪೃಥ್ವಿ, ಪಾಲಿ, ರಾಹುಲ್, ಕೌಶಿಕ್, ಶಶಾಂಕ್, ಭಾರ್ಗವ, ವಿಕಾಸ್, ಅಪ್ಪಿ, ಪಾಲಿ, ವಿನಯ್, ಸಚಿನ್ ಮತ್ತು ರಾಹುಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net