

ಆನಂದ ಅಂಗಡಿ ಹುಬ್ಬಳ್ಳಿ
ಭಾರತೀಯ ರೈಲ್ವೆ ಒಡೆತನದ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಹುಬ್ಬಳ್ಳಿ ಸಮೀಪದ ದೇವರಗುಡಿಹಾಳ ಗ್ರಾಮದಲ್ಲಿರುವ ಶತಮಾನದಷ್ಟು ಹಳೆಯದಾದ ಕೆರೆಯಿಂದ ಮತ್ತೆ ನೀರು ಪಡೆಯಲು ನೈಋತ್ಯ ರೈಲ್ವೆ ವಲಯ ಮುಂದಾಗಿದೆ.
ಹುಬ್ಬಳ್ಳಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ದೇವರಗುಡಿಹಾಳ ಕೆರೆಯಿಂದ ನಗರ ಪ್ರದೇಶ ವ್ಯಾಪ್ತಿಯಲ್ಲಿ ಪೈಪ್ಗಳನ್ನು ಅಳವಡಿಸಿ ನೀರು ಪಡೆಯಲಾಗುತ್ತಿದೆ. ಪ್ರಾರಂಭದ ದಿನಗಳಲ್ಲಿ ಈ ಕೆರೆಯಿಂದ ರೈಲ್ವೆ ನಿಲ್ದಾಣ, ವರ್ಕ್ಶಾಪ್, ಯಾರ್ಡ್ ಹಾಗೂ ಕಾಲನಿಗಳಿಗೆ ನೀರು ನಳದ ಮೂಲಕ ವೇಗವಾಗಿಯೇ ಬರುತ್ತಿತ್ತು. ಆದರೆ, ಕ್ರಮೇಣ ನೀರು ಪೂರೈಕೆ ಕಡಿಮೆಯಾಗುತ್ತ ಹೋಗಿ, 2014ರಲ್ಲಿ ಸಂಪೂರ್ಣ ಸ್ಥಗಿತಗೊಂಡಿತು.
ಕೆರೆಗೆ ಹರಿದುಬರುವ ನೀರು ಕಡಿಮೆಯಾಗಿರುವುದು, ಹಿನ್ನೀರು ಪ್ರದೇಶದಲ್ಲಿ ಉಂಟಾದ ಅಡಚಣೆ, ಪೈಪುಗಳ ಸೋರಿಕೆ ಸೇರಿದಂತೆ ಹಲವಾರು ಕಾರಣಗಳನ್ನು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ನಡೆಸಿದ ಸರ್ವೆಯಲ್ಲಿ ಗುರುತಿಸಿದ್ದರು.
ದೇವರಗುಡಿಹಾಳದಿಂದ ಪೂರೈಕೆ ಸ್ಥಗಿತಗೊಂಡ ನಂತರ ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ಮಹಾನಗರ ಪಾಲಿಕೆಗೆ ಶುಲ್ಕ ಪಾವತಿಸಿ ನೀರು ಪಡೆಯಲು ಪ್ರಾರಂಭಿಸಲಾಯಿತು. ಆದರೆ, ಸಮರ್ಪಕ ನೀರು ಪೂರೈಕೆಯಾಗದೆ ಹಲವಾರು ಸಮಸ್ಯೆಗಳಾಗುತ್ತಿದ್ದವು.
ಇದೀಗ ಮತ್ತೆ ಕೆರೆಯನ್ನು ಪುನರುಜ್ಜೀವನಗೊಳಿಸಲಾಗುತ್ತಿದ್ದು, ನೀರು ಪಡೆಯಲು ನೈಋತ್ಯ ರೈಲ್ವೆ ಮುಂದಾಗಿದೆ. ಇದಕ್ಕಾಗಿ 2.30 ಕೋಟಿ ರೂ.ಗಳನ್ನು ವೆಚ್ಚ ಮಾಡಿರುವ ರೈಲ್ವೆ ವಲಯ, ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ಸರ್ವೆ ನಡೆಸಿದೆ. ಗುತ್ತಿಗೆದಾರರು ಹಿನ್ನೀರು ಪ್ರದೇಶದಲ್ಲೆಲ್ಲ ಕಾಲ್ನಡಿಗೆಯಲ್ಲಿ ಸುತ್ತಾಡಿ ಸರ್ವೆ ನಡೆಸಿದ್ದಾರೆ. ಮಳೆ ನೀರು ಹರಿದುಬರಲು ಇದ್ದ ಅಡಚಣೆಗಳನ್ನು ತೆರವುಗೊಳಿಸಿದ್ದಾರೆ. ಹೊಸ ಪಂಪ್ಗಳನ್ನು ಅಳವಡಿಸಿದ್ದಾರೆ. ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2021ರ ಜನವರಿಯಿಂದ ದೇವರಗುಡಿಹಾಳ ಗ್ರಾಮದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಯಾರ್ಡ್, ವರ್ಕ್ಶಾಪ್ ಹಾಗೂ ಕಾಲನಿಗಳಿಗೆ ಮತ್ತೆ ನೀರು ಹರಿಯಲಿದೆ.
ತಗ್ಗಲಿದೆ ಒತ್ತಡ: ಇದುವರೆಗೆ ರೈಲ್ವೆಗೆ ಪ್ರತಿದಿನ ಅಂದಾಜು 50 ಲಕ್ಷ ಲೀ. ನೀರನ್ನು ಜಲಮಂಡಳಿಯವರು ಪೂರೈಸುತ್ತಿದ್ದರು. ಈಗ ರೈಲ್ವೆಯವರು ತಮಗಾಗಿಯೇ ಇರುವ ಕೆರೆ ಪುನರುಜ್ಜೀವನ ಮಾಡಿದ್ದರಿಂದ ಜಲಮಂಡಳಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ನಿತ್ಯ ಅರ್ಧ ಕೋಟಿ ಲೀ.ಗಳಷ್ಟು ನೀರು ನಗರದ ಇತರ ಬಡಾವಣೆಗೆ ಸುಲಭವಾಗಿ ದೊರೆಯಲಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಯಾರ್ಡ್, ವರ್ಕ್ಶಾಪ್ ಹಾಗೂ ಕಾಲನಿಗಳಿಗೆ ನಿತ್ಯ 45 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಇದೀಗ ದೇವರಗುಡಿಹಾಳದ ಕೆರೆಯಿಂದ ನಿತ್ಯ 50 ಲಕ್ಷ ಲೀಟರ್ ಎತ್ತಬಹುದಾಗಿದೆ. ರೈಲ್ವೆ ಕಾಲನಿಗಳಿಗೆ ಇನ್ನು ಮುಂದೆ ಪ್ರತಿದಿನ ನೀರು ಪೂರೈಸಲಾಗುವುದು. |ಇ. ವಿಜಯಾ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಡಿಜಿಎಂ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ