ಶತಮಾನ ಕಂಡ ಶಾಲೆಗೆ ಹಿಂಬಡ್ತಿ

21 kem 1
Published on

ಕೆಂಭಾವಿ: ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸಾಕಷ್ಟು ಯೋಜನೆಗಳ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರೂ ಆಧುನಿಕ ಜಗತ್ತಿನ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಪಟ್ಟಣದ ಶತಮಾನ ಕಂಡ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ. ಈ ಶಾಲೆ ನೂರು ವರ್ಷಕ್ಕೂ ಹೆಚ್ಚು ಕಾಲ ಪೂರೈಸಿ ಇತ್ತೀಚಿಗಷ್ಟೇ ಶಮಾನೋತ್ವವನ್ನು ಆಚರಿಸಿಕೊಂಡಿದೆ. ನೂರು ವರ್ಷದಿಂದಲೂ ಈವರೆಗೆ ಇದು ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಾಗಿ ಅನೇಕ ಘಟಾನುಘಟಿಗಳ ಶಿಕ್ಷಕರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿದ ಕೀರ್ತಿ ಈ ಶಾಲೆಗಿದೆ.

ಆದರೆ ಸರ್ಕಾರದ ಇತ್ತೀಚಿನ ಕೆಲವೊಂದು ಅವೈಜ್ಞಾನಿಕ ಬದಲಾವಣೆಗಳು, ಶಿಕ್ಷಕರ ಕೊರತೆ, ಶಾಲೆಗಳ ಸರಿಯಾದ ನಿರ್ವಹಣೆ ಕೊರತೆಯಿಂದ ಈ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಟ್ಟು ೨೦೨ ವಿದ್ಯಾರ್ಥಿಗಳ ಮಾತ್ರ ಪ್ರವೇಶಾತಿ ಕಂಡು ಬಂದ ಹಿನ್ನೆಲೆಯಲ್ಲಿ ಪಟ್ಟಣದ ಮೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಾಗಿ ಹಿಂಬಡ್ತಿ ನೀಡಿ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್‌ನಲ್ಲಿ ಆದೇಶ ನೀಡಿದೆ.

ಸರ್ಕಾರದ ಆದೇಶದ ಅನುಸಾರ ಸರ್ಕಾರಿ ಶಾಲೆಯಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಕಡ್ಡಾಯವಾಗಿದೆ. ಈ ಸಂಖ್ಯೆಗಿAತ ಕಡಿಮೆ ದಾಖಲಾತಿ ಕಂಡು ಬಂದರೆ ಅಂಥಾ ಶಾಲೆಗಳನ್ನು ಮಾದರಿ ಪ್ರಾಥಮಿಕ ಶಾಲೆಗಳಿಂದ ಹಿರಿಯ ಪ್ರಾಥಮಿಕ ಶಾಲೆಗಳಾಗಿ ಹಿಂಬಡ್ತಿ ನೀಡುವ ಅಧಿಕೃತ ಆದೇಶ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿದ್ದು, ಇದರಿಂದ ಈ ಭಾರಿಯ ಶೈಕ್ಷಣಿಕ ವರ್ಷದಲ್ಲಿ ಶತಮಾನ ಕಂಡ ಈ ಶಾಲೆಯೂ ಸೇರಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲೆ ಮತ್ತು ಸಂಜೀವನಗರದ ಸರ್ಕಾರಿ ಶಾಲೆಗಳಲ್ಲಿ ೧೫೦ ರಿಂದ ೨೦೦ ಮಕ್ಕಳ ಪ್ರವೇಶಾತಿ ಇದ್ದ ಕಾರಣ ಮಾದರಿ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗಳಾಗಿ ಹಿಂಬಡ್ತಿ ಪಡೆದಿವೆ ಎನ್ನಲಾಗುತ್ತಿದೆ.

ಶಿಕ್ಷಕರ ಕೊರತೆ: ಈ ಶಾಲೆಗಳು ಈಗ ಹಿರಿಯ ಪ್ರಾಥಮಿಕ ಶಾಲೆಗಳಾಗಿ ಪರಿವರ್ತನೆಯಾಗಿದ್ದು, ಇಲ್ಲಿರುವ ಶಿಕ್ಷಕರು ಬೇರೆ ಶಾಲೆಗಳಿಗೆ ವರ್ಗಾವಣೆಯಾಗುತ್ತಿದ್ದು, ಇದರಿಂದ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶತಮಾನ ಕಂಡ ಸರ್ಕಾರಿ ಮಾದರಿ ಶಾಲೆಯಲ್ಲಿ ಒಟ್ಟು ೧೮ ಶಿಕ್ಷಕರ ಅವಶ್ಯಕತೆ ಇದೆ. ಆದರೆ ಕೇವಲ ೫ ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಹಿಂಬಡ್ತಿ ಪಡೆದ ಹಿನ್ನೆಯಲ್ಲಿ ಜೆಷ್ಠತಾ ಆಧಾರದ ಮೇಲೆ ಇಲ್ಲಿ ವರ್ಗಾವಣೆಯಾಗಿ ಬಂದ ಕೆಲ ಶಿಕ್ಷಕರು ಮತ್ತೆ ಮಾದರಿ ಪ್ರಾಥಮಿಕ ಶಾಲೆಗಳಿಗೆ ತೆರಳುವ ಅನಿವಾರ್ಯತೆ ಎದುರಾಗಿದ್ದು ಇಲ್ಲಿ ಮತ್ತೆ ಶಿಕ್ಷಕರ ಕೊರತೆ ಕಂಡು ಬರುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.

ತಜ್ಞರ ಅಭಿಪ್ರಾಯದಂತೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಅನುಮತಿ ನೀಡಿದ್ದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಲು ಮೂಲ ಕಾರಣ ಎನ್ನಲಾಗಿದೆ. ಒಂದು ಖಾಸಗಿ ಶಾಲೆಗೆ ಶಿಕ್ಷಣ ಇಲಾಖೆ ಅನುಮತಿ ನೀಡಬೇಕಾದರೆ ಸರ್ಕಾರಿ ಶಾಲೆಯಿಂದ ಅದು ಕನಿಷ್ಠ ೨ ಕಿಮೀ ದೂರ ಇರಬೇಕು ಎಂಬ ನಿಯಮ ಸೇರಿ ಹಲವು ಷರತ್ತುಗಳು ಸರ್ಕಾರದ ಮಾರ್ಗಸೂಚಿಯಲ್ಲಿವೆ. ಆದರೆ ಇವೆಲ್ಲವವನ್ನು ಗಾಳಿಗೆ ತೂರಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಆಡಳಿತ ಮಂಡಳಿಯ ಕಾಂಚಾಣ ದಾಹಕ್ಕೆ ಮನಸೋತು ಕೇವಲ ೧೦೦ ಮೀಟರ್ ಅಮತರದಲ್ಲಿಯೆ ಎರಡೆರಡು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಮೂಲಕ ಇಂಥ ಹಳೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಕೆಲವು ಕಡೆ ಅತಿಥಿ ಶಿಕಕ್ಷರು ಕಾರ್ಯನಿರ್ವಹಿಸುತ್ತಿದ್ದು ಕಾಯಂ ಶಿಕ್ಷರ ಕೊರತೆ ಮಾತ್ರ ಈ ಎಲ್ಲ ಶಾಲೆಗಳಿಗೆ ಕಾಡಲಿದೆ. ಒಟ್ಟಾರೆ ಹೆಸರು ಮಾಡಿದ ಇಂಥ ಶಾಲೆಗಳನ್ನು ಯಾವುದಕ್ಕೂ ಹಿಂದೆ ಸರಿಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net