ಶತಮಾನ ಕಂಡ ಶಾಲೆ ಸದೃಢಕ್ಕೆ ಯೋಜನೆ

Capture
Published on

ರೇವಣಸಿದ್ದಪ್ಪ ಪಾಟೀಲ್ ಬೀದರ್
ನೂರು ವರ್ಷ (ಶತಮಾನ) ಪೂರೈಸಿದ ಶಾಲೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಿದ್ದು, ಜಿಲ್ಲೆಯ ನಾಲ್ಕು ಶಾಲೆಗಳನ್ನು ಇದರಡಿ ಆಯ್ಕೆ ಮಾಡಿದೆ.

ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿಎಚ್ಪಿಎಸ್), ಔರಾದ್ ತಾಲೂಕಿನ ಹೊಕ್ರಾಣ ಗ್ರಾಮದ ಜಿಎಚ್ಪಿಎಸ್, ಬೆಳಕುಣಿ(ಬಿ) ಜಿಎಚ್ಪಿಎಸ್ ಹಾಗೂ ಬೀದರ್ ನಗರದ ಓಲ್ಡ್ ಸಿಟಿಯಲ್ಲಿನ ಸರ್ಕಾರಿ ಪ್ರೌಢಶಾಲೆ 100 ವರ್ಷ ಪೂರೈಸಿದ್ದು, ಇವು ಯೋಜನೆಯಡಿ ಆಯ್ಕೆಯಾಗಿವೆ.

ರಾಜ್ಯದ ವಿವಿಧೆಡೆ ಹಳೆಯ ಸರ್ಕಾರಿ ಶಾಲೆಗಳಿಗೆ ಕಟ್ಟಡ ದುರಸ್ತಿ ಸೇರಿ ವಿವಿಧ ಸೌಲಭ್ಯಗಳ ಕೊರತೆ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಶತಮಾನ ಪೂರೈಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಶತಮಾನ ಪೂರೈಸಿದ 143 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಗುರುತಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಾಲೆಗಳ ದುರಸ್ತಿ ಇತರ ಸೌಲಭ್ಯ ಒದಗಿಸುವ ಮೂಲಕ ಶಾಲೆಗಳ ಅಂದ ಹೆಚ್ಚಿಸುವ ಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ಸಿಗಲಿದೆ.

ರಾಜ್ಯದ 143 ಸರ್ಕಾರಿ ಶಾಲೆಗಳಿಗೆ 20 ಕೋಟಿ ರೂ. ಅನುದಾನವನ್ನು ಸರ್ಕಾ ರ ಬಿಡುಗಡೆ ಮಾಡಿದೆ. ಇದರಲ್ಲಿ ಜಿಲ್ಲೆಯ ನಾಲ್ಕು ಶತಮಾನ ಕಂಡ ಶಾಲೆಗಳಿಗೆ 58 ಲಕ್ಷ ರೂ. ಅನುದಾನ ಬಂದಿದೆ. ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳುವ ಮುನ್ನ ಕಾರ್ಯಪ್ರವೃತ್ತವಾಗಿ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಕಾಮಗಾರಿ ನಿರ್ವಹಣೆಯಲ್ಲಿ ಪಾರದರ್ಶಕ ನಿಯಮ ಪಾಲಿಸಲು ಸರ್ಕಾರ ನಿರ್ದೇಶನ ನೀಡಿದೆ. ಈ ತಿಂಗಳೊಳಗೆ ಕಾಮಗಾರಿ ಶುರುವಾಗುವ ಸಾಧ್ಯತೆ ಇದೆ.

ವಿವಿಧ ಕಾಮಗಾರಿಗಳು: ಶತಮಾನ ಕಂಡ ಶಾಲೆಗಳ ಸುಂದರೀಕರಣಕ್ಕೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶಾಲಾ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯುವುದು, ದುರಸ್ತಿ, ಕುಡಿಯುವ ನೀರು, ಗ್ರಂಥಾಲಯ ಇತರ ಅಗತ್ಯ ಮೂಲಸೌಕರ್ಯ ಕಲ್ಪಿಸಲು, ಸ್ಮಾರ್ಟ್​ ಕ್ಲಾಸ್, ಡಿಜಿಟಲ್ ಲೈಬ್ರರಿ, ಪ್ರಯೋಗಾಲಯ ಸಹ ನಿರ್ಮಿಸಬಹುದಾಗಿದೆ. ಜಿಲ್ಲೆಯ ನಾಲ್ಕು ಶಾಲೆಗಳಿಗೆ 58 ಲಕ್ಷ ರೂ. ಅನುದಾನ ಮಂಜೂರಾಗಿದೆ. ಅದರಲ್ಲಿ ಯಾವ ಶಾಲೆಗೆ ಎಷ್ಟು ಎಂಬುದನ್ನು ಆಯ್ಕೆಯಾದ ಶಾಲೆಗಳಿಗೆ ಅಗತ್ಯ ಸೌಲಭ್ಯವನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅನುದಾನ ವಿಂಗಡಣೆ ಮಾಡಬೇಕಾಗಿದೆ.

ತಮಾನ ಪೂರೈಸಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು ಶ್ಲಾಘನೀಯ. ಶತಮಾನ ಪೂರೈಸಿದ ಅನುದಾನಿತ, ಖಾಸಗಿ ಶಾಲೆಗಳು ಸಹ ಜಿಲ್ಲೆಯಲ್ಲಿದ್ದು, ಈ ಶಾಲೆಗಳನ್ನೂ ಪರಿಗಣಿಸಿ ಅಭಿವೃದ್ಧಿಗೆ ಅನುದಾನ ನೀಡಬೇಕು.
| ಮಹೇಶ ಮೈಲಾರಿ, ಯುವ ಮುಖಂಡ

ತಮಾನ ಕಂಡ ಜಿಲ್ಲೆಯ ನಾಲ್ಕು ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ಆಯ್ಕೆ ಮಾಡಲಾಗಿದೆ. ಜಿಲ್ಲೆಗೆ 58 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಜಿಲ್ಲಾ ಪಂಚಾಯಿತಿಯ ಇಂಜಿನಿಯರಿಂಗ್ ವಿಭಾಗ ಮೂಲಕ ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
| ಗಣಪತಿ ಬಾರಾಟಕೆ, ಡಿಡಿಪಿಐ ಬೀದರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net