ಶತಕದ ಗಡಿ ದಾಟಿದ ಕರೊನಾ ಸೋಂಕಿತರು

images
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ಏಳು ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಇವರಲ್ಲಿ 5 ಮಂದಿ ಮಹಾರಾಷ್ಟ್ರದಿಂದ ಬಂದವರು, ಇಬ್ಬರು ಪಿ-6149 ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರು. ಇದೀಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 101ಕ್ಕೇರಿದೆ. ಆ ಮೂಲಕ ಕರೊನಾ ವೈರಸ್ ಆರ್ಭಟ ಶತಕದಾಟಿದೆ.

ಶನಿವಾರ ಮುಂಬೈನಿಂದ ಆಗಮಿಸಿದ್ದ ಶಿವಮೊಗ್ಗ ತಾಲೂಕು ಹಕ್ಕಿಪಿಕ್ಕಿ ಕ್ಯಾಂಪ್​ನ ಐದು ಮಂದಿಯನ್ನು ಶಿವಮೊಗ್ಗ ಮೆಗ್ಗಾನ್​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈಗ ಅವರೆಲ್ಲರಲ್ಲೂ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಮೂರು ವರ್ಷದ ಗಂಡು ಮಗುವಿಗೂ ವೈರಸ್ ತಗುಲಿದೆ.

ಶಿವಮೊಗ್ಗ ವಂದನಾ ಟಾಕೀಸ್ ಸಮೀಪದ ನಿವಾಸಿ(ಪಿ-6149)ಯಲ್ಲಿ ಕೆಲ ದಿನಗಳ ಹಿಂದೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಆ ವ್ಯಕ್ತಿಯ ತಂದೆ ತಾಯಿಯಲ್ಲೂ ಕರೊನಾ ವೈರಸ್ ಪತ್ತೆಯಾಗಿದೆ.

ಇದುವರೆಗೆ ಚಿಕಿತ್ಸೆ ಯಶಸ್ವಿಯಾಗಿ ಆಸ್ಪತ್ರೆಯಿಂದ 54 ಮಂದಿ ಹೊರ ಬಂದಿದ್ದಾರೆ. ಮಂಗಳವಾರ ಯಾರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಿಲ್ಲ. ಇನ್ನೂ 304 ಮಂದಿಯ ಲ್ಯಾಬ್ ವರದಿಗೆ ಎದುರು ನೋಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 11,479 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಮಂಗಳವಾರ 121 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ಒಟ್ಟು 477 ಮಂದಿಯನ್ನು ಕಾರಂಟೈನ್​ನಲ್ಲಿ ಇರಿಸಲಾಗಿದೆ. ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ.

ಕರೊನಾ ಸೋಂಕು ಪತ್ತೆಯಾದ ಮೂವರು ವೃದ್ಧರನ್ನು ಮುಂಜಾಗ್ರತೆ ದೃಷ್ಟಿಯಿಂದ ಐಸಿಯುನಲ್ಲಿ ಇರಿಸಲಾಗಿತ್ತು. ಈಗ ಯಾರೂ ಐಸಿಯುನಲ್ಲಿ ಇಲ್ಲ. ರಾಜ್ಯ ಮಟ್ಟದ ಹೆಲ್ತ್ ಬುಲೆಟಿನ್​ನಲ್ಲಿ ಅಂಕಿ ಅಂಶ ಪ್ರಕಟವಾಗುವ ಸಂದರ್ಭದಲ್ಲಿ ಐಸಿಯುನಲ್ಲಿ ಮೂವರು ಎಂದು ಪ್ರಕಟಿಸಿದ್ದು, ಇದನ್ನು ಸರಿಪಡಿಸುವಂತೆ ತಿಳಿಸಲಾಗಿದೆ.

| ಕೆ.ಬಿ.ಶಿವಕುಮಾರ್ ಜಿಲ್ಲಾಧಿಕಾರಿ

ಡಿಸಿ ಕಚೇರಿ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ: ಇನ್ನು ಮುಂದೆ ಮಾಸ್ಕ್ ಧರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಮಂಗಳವಾರ ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಾಸ್ಕ್ ಧರಿಸುವ ಕುರಿತು ಅರಿವು ಮೂಡಿಸುವ ಜತೆಗೆ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇನ್ನು ಮುಂದೆ ಮಾಸ್ಕ್ ಧರಿಸದವರಿಗೆ ನಮ್ಮ ಕಚೇರಿಗೂ ಅವಕಾಶ ನೀಡಬೇಡಿ ಎಂದು ಹೇಳಿದರು.

ಮೊಕದ್ದಮೆ ದಾಖಲಿಸಿ:

ಶಿವಮೊಗ್ಗ ತಾಲೂಕಿನ ಹಕ್ಕಿಪಿಕ್ಕಿ ಕಂಟೇನ್ಮೆಂಟ್ ವಲಯದಲ್ಲಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಹೇಳಿದರು. ಜಿಲ್ಲೆಯಲ್ಲಿ 11 ಕಂಟೇನ್ಮೆಂಟ್ ವಲಯಗಳನ್ನು ಈಗಾಗಲೇ ಘೊಷಿಸಲಾಗಿದೆ. ನಿವಾಸಿಗಳು ನಿಯಮಗಳನ್ನು ಉಲ್ಲಂಘಿಸದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದರು.

ಎಸ್ಪಿ ಕೆ.ಎಂ.ಶಾಂತರಾಜು, ಎಡಿಸಿ ಜಿ.ಅನುರಾಧಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಶಂಕರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net