

ಶಿವಮೊಗ್ಗ: ರಾಜಿ ಸಂಧಾನದಿಂದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸಂಬಂಧ ಮತ್ತು ಸಮಯವನ್ನು ಕಕ್ಷಿದಾರರು ಉಳಿಸಿಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ದೇವದಾಸ್ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಶನಿವಾರ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲಿಯವರೆಗೆ ಮನುಷ್ಯ ಇರುತ್ತಾನೋ ಅಲ್ಲಿಯವರೆಗೆ ವ್ಯಾಜ್ಯಗಳಿರುತ್ತವೆ. ಆದರೆ ಕಕ್ಷಿದಾರರು ಆದಷ್ಟು ಕೋರ್ಟಿಗೆ ಬರುವುದನ್ನು ಕಡಿಮೆ ಮಾಡಬೇಕು. ಬಹಳಷ್ಟು ವ್ಯಾಜ್ಯಗಳನ್ನು ತಮ್ಮಲ್ಲೇ ಇತ್ಯರ್ಥಪಡಿಸಿಕೊಳ್ಳಬಹುದು. ಮಧ್ಯಸ್ಥಿಕೆ ಮತ್ತು ರಾಜಿ ಮಾಡುವ ಮೂಲಕ ಅನೇಕ ಸಮಸ್ಯೆ, ವ್ಯಾಜ್ಯಗಳನ್ನು ಇತ್ಯರ್ಥಪಡಿಸಬಹುದು. ಈ ಉದ್ದೇಶದಿಂದಲೇ ಲೋಕ ಅದಾಲತ್ ನಡೆಸಲಾಗುತ್ತಿದೆ. ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಮತ್ತು ಅವರ ಸಮಯ, ಸಂಬಂಧ, ಹಣ ಉಳಿಸಲು ಲೋಕ ಅದಾಲತ್‌ನಲ್ಲಿ ರಾಜಿ ಸೂತ್ರದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ವ್ಯಾಜ್ಯಗಳು, ಭಿನ್ನಾಭಿಪ್ರಾಯಗಳು ಕಡಿಮೆಯಾದಷ್ಟೂ ಸಂತೋಷವಾಗಿರಲು ಸಾಧ್ಯ. ಆದ್ದರಿಂದ ಕಕ್ಷಿದಾರರು ತಮ್ಮ ಭಿನ್ನಾಭಿಪ್ರಾಯವನ್ನು ಸೂಕ್ತ ರೀತಿಯಲ್ಲಿ ನಿವಾರಿಸಿಕೊಳ್ಳಲು ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮೂರನೇ ಲೋಕ ಅದಾಲತ್ ನಡೆಸಲಾಗುತ್ತಿದೆ. ಜಿಲ್ಲೆಯ 12 ಪೀಠಗಳು ಇಂದು ಲೋಕ ಅದಾಲತ್ ನಿರ್ವಹಣೆ ಮಾಡುತ್ತಿವೆ. ನ್ಯಾಯಾಲಯದ 12 ಸಾವಿರ ಪ್ರಕರಣಗಳು ಮತ್ತು 85 ಸಾವಿರ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಲಾಗಿದೆ. ಜುಲೈನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 10,691 ನ್ಯಾಯಾಲಯದ ಪ್ರಕರಣಗಳು ಮತ್ತು 78,110 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 88,801 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು ಎಂದರು.
ಇದೇ ವೇಳೆ ಸಾಂಕೇತಿಕವಾಗಿ ಪ್ರಕರಣಗಳ ರಾಜಿ ಪತ್ರಗಳ ವಿತರಣೆ ನಡೆಯಿತು. ಹೊಳಲೂರಿನ ವ್ಯಾಜ್ಯ ಪ್ರಕರಣದಲ್ಲಿ ರಾಜಿ ಆದ ಕುಟುಂಬಗಳ ಕಕ್ಷಿದಾರರಿಗೆ, ಅಪಘಾತ ಪ್ರಕರಣದಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದವರಿಗೆ ರಾಜಿಪತ್ರ ನೀಡಲಾಯಿತು. ಹಾಗೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ರಾಜಿಯಾದ ದಂಪತಿಗೆ ಹಾರ ಬದಲಾಯಿಸಿ, ಸಿಹಿ ನೀಡಿ ರಾಜಿಪತ್ರ ವಿತರಣೆ ಮಾಡಲಾಯಿತು.
ಮುಖ್ಯಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ಪಾಲ್ಗೊಂಡಿದ್ದರು. ನ್ಯಾಯಾಧೀಶರು, ಅಭಿಯೋಜಕರು, ನ್ಯಾಯವಾದಿಗಳು, ವಿಮಾ ಕಂಪನಿ ಅಧಿಕಾರಿಗಳು, ಕಕ್ಷಿದಾರರು ಹಾಜರಿದ್ದರು.