ಶಕ್ತಿಸ್ವರೂಪಿಣಿ ಕೂಷ್ಮಾಂಡ ದೇವಿ ಆರಾಧನೆ

Ucchangi Yallamma Devi
Published on

ಚಿತ್ರದುರ್ಗ: ಶಕ್ತಿಸ್ವರೂಪಿಣಿ ಕೂಷ್ಮಾಂಡ ದೇವಿಯ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಭಾನುವಾರ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿತು.

ಶರನ್ನವರಾತ್ರಿ ಮಹೋತ್ಸವದ ನಾಲ್ಕನೇ ದಿನದ ಪೂಜೆಯೂ ಹಲವೆಡೆ ಕಳೆಗಟ್ಟಿತ್ತು. ದೇವಿಗೆ ಪೂಜೆ ಸಲ್ಲಿಸಿ ಕುಟುಂಬ, ನಾಡು ಸಮೃದ್ಧಿಗಾಗಿ ಹಲವರು ಪ್ರಾರ್ಥಿಸಿಕೊಂಡರು.

ದೇಗುಲಗಳಲ್ಲಿ ಅಷ್ಟೋತ್ತರ, ಸಹಸ್ರನಾಮ ಸೇರಿ ದೇವಿ ಮಂತ್ರ ಪಠಣದೊಂದಿಗೆ ಕೂಷ್ಮಾಂಡ ಮಾತೆಗೆ ಶ್ರದ್ಧಾ-ಭಕ್ತಿ ಸಮರ್ಪಿಸಲಾಯಿತು.

ಐದು ಎಡೆಯ ಸರ್ಪದೊಳಗೆ ಉಚ್ಚಂಗಿಯಲ್ಲಮ್ಮ ದೇವಿ ಕುಳಿತಿರುವ ಮಾದರಿ, ಕಾಳಿ ಕಮಠೇಶ್ವರಿ ದೇವಿಗೆ ಹಣ್ಣಿನಾಲಂಕಾರ, ಬರಗೇರಮ್ಮ ದೇವಿಗೆ ರೇಷ್ಮೆ ಸೀರೆಗಳಿಂದ ವಿಶೇಷಾಲಂಕಾರ, ಏಕನಾಥೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆ ಮಾರಮ್ಮ ದೇವಿಗೆ ಪುಷ್ಪಾಲಂಕಾರ ಸೇವೆ ನೆರವೇರಿತು.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚೌಡೇಶ್ವರಿ, ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ಚಾಮುಂಡೇಶ್ವರಿ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆ ಜರುಗಿದವು.

ತಾಲೂಕಿನ ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಗೆ ವಿವಿಧ ವರ್ಣದ ನೂರಾರು ಬಳೆ, ಕನಕಾಂಬರ ಪುಷ್ಪ, ಬೊಗಳೇರಹಟ್ಟಿ ದುರ್ಗಾಂಬಿಕಾ ದೇವಿಗೆ ತಾವರೆ ಹೂವಿನಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net