

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನಲ್ಲಿ ತಯಾರಾಗುವ ಆಕರ್ಷಕ ಬೊಂಬೆಗಳಿಂದಾಗಿ ಈಗಾಗಲೇ ಚನ್ನಪಟ್ಟಣ ವಿಶ್ವಪ್ರಸಿದ್ಧಿ ಪಡೆದಿದೆ. ಇದರೊಂದಿಗೆ ತಾಲೂಕಿಗೆ ಮತ್ತೊಂದು ಕಿರೀಟವೆಂದರೆ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರ.
ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ದೇವಿಯ 66 ಅಡಿಗಳ ಬೃಹತ್ ಪಂಚಲೋಹದ ವಿಗ್ರಹ ಭಕ್ತರು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕ್ಷೇತ್ರವು ತಾಲೂಕು ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ.
ಚಾಮುಂಡೇಶ್ವರಿ ವಿಗ್ರಹ ಹಲವು ವೈಶಿಷ್ಟ$್ಯಗಳ ಸಂಗಮವಾಗಿದೆ. ಬೃಹತ್ ವಿಗ್ರಹದಲ್ಲಿ ದೇವಿ ಹಸನ್ಮುಖಿಯಾಗಿರುವ ರೂಪವನ್ನು ಕೆತ್ತಲಾಗಿದೆ. ಹದಿನೆಂಟು ಶಕ್ತಿ ಕೇಂದ್ರಗಳಲ್ಲಿ ಮೂರನೇ ಶಕ್ತಿ ಪೀಠ ಎನಿಸಿಕೊಂಡ ಪುರಾಣ ಪ್ರಸಿದ್ಧವಾದ ಮೈಸೂರು ಚಾಮುಂಡೇಶ್ವರಿ ದೇವಿಯ ಅನುಗ್ರಹದಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಮೆ ಮಾಡಲಾಗಿದೆ. ಹದಿನೆಂಟು ಶಕ್ತಿ ಪೀಠಗಳ ಪ್ರತಿಕವಾಗಿ ದೇವಿಗೆ ಹದಿನೆಂಟು ಭುಜಗಳನ್ನು ನಿರ್ಮಿಸಿದ್ದು ಆಶೀರ್ವಾದ ಸಮೇತ ದೇವಿ ಶಕ್ಯ್ತಾನುಸಾರ ಆಯುಧಗಳನ್ನು ಹಿಡಿದಿದ್ದಾಳೆ. ಹದಿನೆಂಟು ಭುಜಗಳಲ್ಲಿ ಶಂಖ ಚಕ್ರ, ಗದಾ ಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಹೀಗೆ ಹದಿನೆಂಟು ಬಗೆಯ ಆಯುಧಗಳು ದೇವಿಯ ಕೈಯಲ್ಲಿದೆ. ಈ ಬೃಹತ್ ಪ್ರತಿಮೆ ನಿರ್ಮಿಸಲು ಭಕ್ತರು ಕಂಚು, ತಾಮ್ರ, ಬೆಳ್ಳಿ, ಹಿತ್ತಾಳೆ, ಚಿನ್ನದ ವಸ್ತುಗಳನ್ನು ನೀಡಿದ್ದಾರೆ. ವಿಗ್ರಹದ ಶಿಲ್ಪಿ ಮುಸ್ಲಿಂ ಸಮುದಾಯದವರು ಎಂಬುದು ಮತ್ತೊಂದು ವಿಶೇಷ.
ಶಕ್ತಿಯ ನೆಲೆಬೀಡು: ಬಸವಪ್ಪ ಪುಣ್ಯಕ್ಷೇತ್ರ ಶಕ್ತಿಯ ನೆಲೆಬೀಡು ಎಂಬುದರಲ್ಲಿ ಎರಡು ಮಾತಿಲ್ಲ. ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ನೆಲೆಸಿರುವ ದೇವಿ ಸಂಕಷ್ಟದಲ್ಲಿರುವವರ ಪಾಲಿನ ಸಂಜೀವಿನಿಯಾಗಿದ್ದಾಳೆ. ಕ್ಷೇತ್ರದಲ್ಲಿ ಪ್ರತಿ ಭೀಮನ ಅಮಾವಾಸ್ಯೆಯಂದು ಭಕ್ತರ ಕೈಯಲ್ಲಿ ದೇವಿಗೆ ಅಭಿಷೇಕ ಮಾಡಿಸಲಾಗುತ್ತದೆ. ಹಾಗೂ ಪೂಜಾ ಕಾರ್ಯಕ್ರಮ ಮತ್ತು ಉತ್ಸವಗಳನ್ನು ಆಯೋಜಿಸಲಾಗುತ್ತದೆ. ಇನ್ನು ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಕ್ಷೇತ್ರದಲ್ಲಿ ನೆಲೆಸಿರುವ ತಾಯಿಯೂ ಭಕ್ತರ ಆರಾಧ್ಯ ದೈವಳಾಗಿದ್ದು, ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯಗಳಲ್ಲೂ ತಾಯಿಯ ಭಕ್ತರಿದ್ದಾರೆ.
24 ತಾಸು ಭಕ್ತರಿಗೆ ಅನ್ನದಾಸೋಹ: ದೇವಿ ಚಾಮುಂಡೇಶ್ವರಿ ದರ್ಶನ ಹಾಗೂ ಅನ್ನದಾಸೋಹ 24 ತಾಸು ನಡೆಯುವುದು ಇಲ್ಲಿನ ವಿಶೇಷ. ರಾತ್ರಿ ಬಂದವರು ದೇವಿಯ ದರ್ಶನ ಮಾಡಿ ಅನ್ನಪೂರ್ಣೇಶ್ವರಿಯ ಅನ್ನಪ್ರಸಾದ ನಿಲಯದಲ್ಲಿ ಊಟ ಮಾಡಿಕೊಂಡು ಹೋಗಬಹುದಾಗಿದೆ.
ಪವಾಡ ಬಸವಪ್ಪನೂ ಇದ್ದಾರೆ: ಕ್ಷೇತ್ರದಲ್ಲಿನ ಜೀವಂತ ಬಸವಪ್ಪ ಕ್ಷೇತ್ರದ ಮತ್ತೊಂದು ವಿಶೇಷ. ದೇವಸ್ಥಾನಗಳ ಅರ್ಚಕರ ನೇಮಕ, ದೇವಸ್ಥಾನಕ್ಕೆ ಗುದ್ದಲಿ ಪೂಜೆ, ಗೃಹ ಪ್ರವೇಶ, ಮದುವೆ, ಕೊಳವೆಬಾವಿ ಕೊರೆಸಲು ಜಾಗ ಗುರುತಿಸುವುದು, ಕುಡಿತ ಬಿಡಿಸುವುದು ಈ ಬಸವಪ್ಪ ಪವಾಡಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಕಷ್ಟ ಪರಿಹಾರಕ್ಕೆ ಬಸಪ್ಪನ ಮೊರೆ ಹೋಗುತ್ತಾರೆ. ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ಬಸವಪ್ಪ ಇತ್ತೀಚೆಗೆ ಕಾಲವಾಗಿದ್ದು, ಆ ಜಾಗಕ್ಕೆ ಪಟ್ಟಾಭಿಷೇಕವಾದ ನೂತನ ಬಸವಪ್ಪ ಸಹ ಈ ಹಿಂದಿನಂತೆಯೇ ಪವಾಡಗಳನ್ನು ಸೃಷ್ಟಿಸುತ್ತಿರುವುದು ಸೋಜಿಗ ಎನಿಸುತ್ತದೆ.
ಹೈಟೆಕ್ ಮ್ಯೂಸಿಯಂ ನಿಮಾರ್ಣದ ಗುರಿ
ಕ್ಷೇತ್ರದಲ್ಲಿ ಹೈಟೆಕ್ ಮ್ಯೂಸಿಯಂ ನಿರ್ಮಿಸಲು ಚಿಂತಿಸಲಾಗಿದೆ. ಸನಾತನ ಧರ್ಮಗುರುಗಳು, ಮಹಾನ್ ಸಂತರು, ಬಸವಣ್ಣನವರ ಅನುಭವ ಮಂಟಪ, ವಚನಕಾರ್ತಿಯರ ಪ್ರತಿಮೆ, ಮಹಾರಾಜರ ಪ್ರತಿಮೆ ಸ್ಥಾಪನೆ ಮಾಡಿ ಅದನ್ನು ಹೈಟೆಕ್ ಮ್ಯೂಸಿಯಂನಲ್ಲಿ ಇಡಲಾಗುತ್ತದೆ. ಇದರ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ದೇವಿಯ ವಿಗ್ರಹದ ಹಿಂದೆ ಕೃತಕ ಜಲಪಾತ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ.
ತಲುಪುವುದು ಹೇಗೆ?: ಚಾಮುಂಡೇಶ್ವರಿ ಕ್ಷೇತ್ರಕ್ಕೆ ತಲುಪಲು ಚನ್ನಪಟ್ಟಣ ಬಸ್ ನಿಲ್ದಾಣದಿಂದ ಬಸ್ಗಳಿವೆ. ಮಲ್ಲನಕುಪ್ಪೆ ಮಾರ್ಗದ ಬಸ್ ಹತ್ತಿ ಗೌಡಗೆರೆ ಗೇಟ್ ಬಳಿ ಇಳಿದು ಒಂದು ಕಿ.ಮೀ. ನಡೆಯಬೇಕು. ಗೌಡಗೆರೆ ಗೇಟ್ನಿಂದ ಆಟೋ ವ್ಯವಸ್ಥೆ ಇದೆ. ಸ್ವಂತ ವಾಹನದಲ್ಲಿ ಹೋಗುವವರು ಚನ್ನಪಟ್ಟಣ- ನಿಡಸಾಲೆ ರಸ್ತೆಯಲ್ಲಿ ಸಾಗಿ ಗೌಡಗೆರೆ ಗೇಟ್ ಬಳಿ ಬಲಕ್ಕೆ ತಿರುಗಿದರೆ ಕ್ಷೇತ್ರ ತಲುಪಹುಬುದು. ಕೆಸ್ತೂರು ಮಾರ್ಗವಾಗಿ ಬರುವವರು ಮಲ್ಲನಕುಪ್ಪೆ ಗೇಟ್ನಿಂದ ಗೌಡಗೆರೆಗೆ ಬರಬಹುದಾಗಿದೆ.
ಕ್ಷೇತ್ರದಲ್ಲಿರುವ ಬಸವಪ್ಪ ಹಲವು ಜನರಿಗೆ ಬೇಕಾದುದನ್ನು ಕರುಣಿಸಿದ್ದಾನೆ. ಚಾಮುಂಡೇಶ್ವರಿ ಸೌಮ್ಯ ರೂಪಿಣಿಯಾಗಿ ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದಾಳೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಅನ್ನದಾಸೋಹ ನಡೆಯುತ್ತದೆ. ಕ್ಷೇತ್ರಕ್ಕೆ ಬರುವ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಒಂದು ಸುಂದರ ಪ್ರವಾಸಿ ತಾಣವಾಗಿ ನಿರ್ಮಿಸಲಾಗುತ್ತದೆ. ಡಾ.ಮಲ್ಲೇಶ್ ಗುರೂಜಿ, ಧರ್ಮದರ್ಶಿ, ಪುಣ್ಯ ಕ್ಷೇತ್ರ ಗೌಡಗೆರೆ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹ ರಾಜ್ಯದಲ್ಲಷ್ಟೇ ಅಲ್ಲದೆ ಹೊರರಾಜ್ಯ, ವಿದೇಶದಲ್ಲೂ ಸದ್ದು ಮಾಡಿದೆ. ದೇವಾಲಯದ ವೆಬ್ಸೈಟ್ನಲ್ಲಿ ನೋಡಿದ ವಿದೇಶಿಗರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಹಲವು ದಿಗ್ಗಜರು ಸಹ ದೇವಿಯ ಆರ್ಶೀವಾದ ಪಡೆದಿದ್ದಾರೆ. ಸಾಮಾಜಿಕ ಜಾಲತಾಣ, ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ದೇವಿಯ ಬಗ್ಗೆ ತಿಳಿದು, ವಿಳಾಸವನ್ನು ಪಡೆದು, ಗೂಗಲ್ ಮ್ಯಾಪ್ ಬಳಸಿ ಶ್ರೀಕ್ಷೇತ್ರಕ್ಕೆ ಬಂದು ತಾಯಿಯ ದರ್ಶನವನ್ನು ಪಡೆಯುತ್ತಿದ್ದಾರೆ. ವಾರಾಂತ್ಯದಲ್ಲಿ ಜನರ ದಂಡೇ ಹರಿದು ಬರುತ್ತಿದೆ. ಬಾಬು ದೇವಾಲಯದ ಟ್ರಸ್ಟಿ