

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆ ದೇಗುಲಗಳಲ್ಲಿ ಶ್ರಾವಣ ಮಾಸದ ಅಂಗವಾಗಿ ದೇವಿಯರ ಮೂರ್ತಿಗಳಿಗೆ ಮಾಸದ ಮೂರನೇ ಶುಕ್ರವಾರ ಪುಷ್ಪ ಸೇರಿ ವಿವಿಧ ವಸ್ತುಗಳಿಂದ ವೈವಿಧ್ಯಮಯ ಅಲಂಕಾರ ಸೇವೆ ನೆರವೇರಿತು.
ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಸೇರಿ ವಿವಿಧ ದೇಗುಲಗಳಲ್ಲಿ ಮುಂಜಾನೆಯಿಂದಲೇ ಅಲಂಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಹಲವು ಬಗೆಯ ಪುಷ್ಪಗಳಿಂದ ಸಿಂಗರಿಸಿದ ನಂತರ ಮೊದಲ ಪೂಜೆ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ಏಕನಾಥೇಶ್ವರಿ ದೇವಿ ದೇಗುಲ ಹೊರತುಪಡಿಸಿ ವಿವಿಧ ದೇಗುಲಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9.30ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಷ್ಟಾರ್ಥ ಸಿದ್ಧಿಗಾಗಿ ಅನೇಕರು ಪ್ರಾರ್ಥಿಸಿಕೊಂಡರು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ಮೂರನೇ ವಾರವೂ ನಗರ ಸೇರಿ ಜಿಲ್ಲಾದ್ಯಂತ ‘ಶುಕ್ರಗೌರಿ’ ವ್ರತಾಚರಣೆಯನ್ನು ಅನೇಕ ಮಹಿಳೆಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿ, ಸಂಭ್ರಮಿಸಿದರು.
ವ್ರತಾಚರಣೆ ಅಂಗವಾಗಿ ದೇವರ ಕೋಣೆಗಳು ಶುಚಿಗೊಂಡಿದ್ದವು. ತಳಿರು-ತೋರಣಗಳಿಂದ ಅಲಂಕರಿಸಿ, ಪಾರ್ವತಿ ದೇವಿ ಸ್ವರೂಪಿಣಿಯಾದ ಶುಕ್ರಗೌರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದರು. ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರನ್ನು ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬಿದರು. ಮಹಿಳಾ ಭಕ್ತರು ಭಕ್ತಿಯಲ್ಲಿ ಮಿಂದೆದ್ದರು.