ಶಕ್ತಿದೇವತೆಗಳ ಕಾರ್ತಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ

Ucchhangi Yallamma Devi
Published on

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆಗಳ ದೇಗುಲಗಳಲ್ಲಿ ಶುಕ್ರವಾರ ಕಡೇ ಕಾರ್ತಿಕ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಉಚ್ಚಂಗಿಯಲ್ಲಮ್ಮ, ಬುರುಜನಹಟ್ಟಿಯ ಬನಶಂಕರಿ, ಚೌಡೇಶ್ವರಿ ದೇವಿ ದೇಗುಲಗಳ ಆವರಣದಲ್ಲಿ ಸಾಲು-ಸಾಲಾಗಿ ಇಡಲಾಗಿದ್ದ ಸಾವಿರಾರು ದೀಪಗಳನ್ನು ಹಚ್ಚುವ, ಅದಕ್ಕೆ ಶ್ರದ್ಧೆಯಿಂದ ಎಣ್ಣೆ ಹಾಕುವ ಮೂಲಕ ನೆರೆದಿದ್ದ ಭಕ್ತರು ಭಕ್ತಿ ಸಮರ್ಪಿಸಿದರು.

ಉತ್ಸವಾಂಬ: ಪಾಳೆಗಾರರ ಕುಲದೇವತೆ ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಕಾರ್ತಿಕ ಮಹೋತ್ಸವ, ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಜರುಗಿತು. ದೇವಿ ಮೂರ್ತಿಗೆ ವರಹಾ, ಮತ್ಸೃ, ವಿಷ್ಣು, ದಿವ್ಯ ನಾರಾಯಣ, ಲಕ್ಷ್ಮೀ ನಾರಾಯಣ, ಶಕ್ತಿ ಸೇರಿ ನೂರಾರು ಸಾಲಿಗ್ರಾಮಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು. ಇಡೀ ಆವರಣದಲ್ಲಿ ಭಕ್ತೋತ್ಸಾಹ ಮುಗಿಲುಮುಟ್ಟಿತ್ತು. ಸಂಜೆ 6.30ರ ನಂತರ ನಡೆದ ದೀಪೋತ್ಸವದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು.

ನಾಗ ಚೌಡೇಶ್ವರಿ: ಮೆದೇಹಳ್ಳಿ ರಸ್ತೆಯ ರಾಮತೀರ್ಥ ಆಶ್ರಮ ಪಕ್ಕದಲ್ಲಿನ ನಾಗ ಚೌಡೇಶ್ವರಿ ದೇವಿಯ ಕಾರ್ತಿಕ ಮಹೋತ್ಸವದ ಅಂಗವಾಗಿ ದೇವಿಗೆ ಅಭಿಷೇಕ, ಅಲಂಕಾರ ಸೇರಿ ವಿಶೇಷ ಪೂಜೆಗಳು ಜರುಗಿದವು. ದೀಪಾರಾಧನೆ, ಅನ್ನದಾಸೋಹದಲ್ಲಿ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು ಎಂದು ಮರುಳಪ್ಪ, ಮರುಳಸಿದ್ದೇಶ್ವರ ಬಡಾವಣೆ ಹಾಗೂ ಮೆದೇಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net