ಶಕ್ತಿದೇವತೆ ಬರಗೇರಮ್ಮ ದೇವಿ ಜಾತ್ರೆ ಆರಂಭ

CTD 25 Barageramma
Published on

ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ಹೊಳಲ್ಕೆರೆ ರಸ್ತೆಯಲ್ಲಿ ವಿರಾಜಮಾನಳಾಗಿ ನೆಲೆನಿಂತು, ಭಕ್ತರಕ್ಷಕಿ ಎನಿಸಿಕೊಂಡಿರುವ ಶಕ್ತಿದೇವತೆ ಬರಗೇರಮ್ಮ ಜಾತ್ರಾ ಮಹೋತ್ಸವ ಏ. 26ರಂದು ರಾತ್ರಿ 8ಕ್ಕೆ ಕಂಕಣಧಾರಣೆ, ಮಧುವಣಗಿತ್ತಿ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗಲಿದೆ.

ಅಕ್ಕ-ತಂಗಿಯರಾದ ಚಿತ್ರದುರ್ಗದ ರಕ್ಷಕ ದೇವತೆಗಳೆಂದೇ ಖ್ಯಾತಿ ಪಡೆದ ನವದುರ್ಗೆಯರ ಪೈಕಿ ಬರಗೇರಮ್ಮ ಪ್ರಮುಖ ದೇವತೆಯಾಗಿದ್ದು, ಚಿತ್ರದುರ್ಗ ಅಷ್ಟೇ ಅಲ್ಲದೆ, ರಾಜ್ಯದ ವಿವಿಧೆಡೆಯ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ.

ಜಾತ್ರೆ ವಿಶೇಷ: ಪ್ರತಿ ವರ್ಷ ಯುಗಾದಿ ಬಳಿಕ ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ಜಾತ್ರೆಗೆ ಸಾರು ಹಾಕಿದ ನಂತರವೇ ಜಿಲ್ಲೆ ಮತ್ತು ತಾಲೂಕಿನ 66 ದೇವಿಯರ ಜಾತ್ರೆ, ರಥೋತ್ಸವ ಜರುಗುತ್ತದೆ. ಇದೇ ವೇಳೆ ಬರಗೇರಮ್ಮನ ಜಾತ್ರಾ ಮಹೋತ್ಸವವೂ ನಡೆಯಲಿದೆ.

2024ನೇ ಸಾಲಿನ ದೇವಿಯ ಜಾತ್ರೆಯೂ 15 ದಿನ ಜರುಗಲಿದೆ. ಏ. 30ರಂದು ರಾತ್ರಿ 8ಕ್ಕೆ ದೇವಿಯ ಉತ್ಸವ ಮೂರ್ತಿಯನ್ನು ಬುರುಜನಹಟ್ಟಿಯ ದೇಗುಲದಿಂದ ಊರ ಹೊರಗಿನ ದೇಗುಲಕ್ಕೆ ಕರೆ ತರುವುದು. ನಂತರ ಕರಿಯಟ್ಟಿಯಲ್ಲಿನ ಭಕ್ತರಿಂದ ಪೂಜೆ ಸ್ವೀಕಾರ.

ಮೇ 1ರಂದು ಬೆಳಗ್ಗೆ 9ಕ್ಕೆ ಚಂದ್ರವಳ್ಳಿಯಲ್ಲಿ ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ ನಂತರ ದೇಗುಲಕ್ಕೆ ಆಗಮನ. ಅನ್ನಸಂತರ್ಪಣೆ ನಂತರ ರಾತ್ರಿ ಈರಜ್ಜನಹಟ್ಟಿ ಹಾಗೂ ನಾಯಕರ ಸೊಲ್ಲಾಪುರದಲ್ಲಿ ಭಕ್ತರಿಂದ ಪೂಜೆ ಸ್ವೀಕಾರ.

2ರಂದು ದೇವಿಯು ನಾಯಕರ ಸೊಲ್ಲಾಪುರದಿಂದ ಹೊರಟು ಕೆಳಗಿನ ಸೊಲ್ಲಾಪುರ, ಗೊಲ್ಲರಹಟ್ಟಿ, ಟಗರನಹಟ್ಟಿ, ದೇವರಹಟ್ಟಿ, ಜಾಲಿಕಟ್ಟೆ ಮತ್ತು ಮಾಳಪ್ಪನಹಟ್ಟಿ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ದೇಗುಲಕ್ಕೆ ಮರಳುವುದು. ಅಂದು ಬೆಳಗ್ಗೆ 7ಕ್ಕೆ ಪಿಳ್ಳೇಕೆರನಹಳ್ಳಿ, ಮೆದೇಹಳ್ಳಿ ರಸ್ತೆ, ಬಿವಿಕೆಎಸ್ ಲೇ ಔಟ್, ಚೇಳುಗುಡ್ಡ, ನೆಹರು ನಗರ, ಪಿ ಅಂಡ್ ಟಿ ಕ್ವಾಟ್ರರ್ಸ್, ಜ್ಞಾನಭಾರತಿ ಹಿಂಭಾಗದ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

3ರಂದು ದೇವಿಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ಬೆಳಗ್ಗೆ 9.30ರಿಂದ ಸಂಜೆವರೆಗೂ ಸಕಲ ವಾದ್ಯಗಳೊಡನೆ ನಗರದ ರಾಜ ಬೀದಿಗಳಲ್ಲಿ ರಥೋತ್ಸವ, ಭಕ್ತರಿಂದ ಮೀಸಲು ಸಮರ್ಪಣೆ, ಹರಕೆ ಸಲ್ಲಿಕೆ. ರಥೋತ್ಸವ ಮೆರವಣಿಗೆಯ ಸಂಪೂರ್ಣ ಜವಾಬ್ದಾರಿಯನ್ನು ಬುರುಜನಹಟ್ಟಿ ಬರಗೇರಮ್ಮ ಯುವಕ ವೃಂದ ವಹಿಸಿಕೊಂಡಿದೆ.

ಅಂದು ಸಂಜೆ 5.30ಕ್ಕೆ ಬಾರ್‌ಲೈನ್, ತಿಪ್ಪಜ್ಜಿ ಸರ್ಕಲ್, ಮುನ್ಸಿಪಲ್ ಕಾಲನಿ, ಚರ್ಚ್ ಬಡಾವಣೆ, ಕೆಳಗೋಟೆ ಪ್ರದೇಶದ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ದೇಗುಲಕ್ಕೆ ಮರಳುವುದು.

4ರಂದು ಬೆಳಗ್ಗೆ 8ಕ್ಕೆ ದೇಗುಲದಿಂದ ಹೊರಟು ದರ್ಜಿ ಕಾಲನಿ, ಗೋಪಾಲಪುರ, ಜೆಸಿಆರ್ ಹಾಗೂ ವಿ.ಪಿ. ಬಡಾವಣೆ ಹಾಗೂ 5ರಂದು ಅಗಸನಕಲ್ಲು, ರೈಲ್ವೆ ನಿಲ್ದಾಣ, ಗಾರೆಹಟ್ಟಿ, ಕವಾಡಿಗರಹಟ್ಟಿ, ಮಠದ ಕುರುಬರಹಟ್ಟಿ, ಕೋಡನಹಟ್ಟಿ, ಕರ್ಲ್ಲಹಟ್ಟಿಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

6ರಂದು ದೇವಿಗೆ ಬೆಳಗ್ಗೆ 8ಕ್ಕೆ ವಿಶೇಷ ಭಂಡಾರದ ಪೂಜೆ, ರಾತ್ರಿ 8ಕ್ಕೆ ಓಕಳಿ ಸೇವೆ, ಬುರುಜನಹಟ್ಟಿ ಪ್ರವೇಶದ ನಂತರ ಅಲ್ಲಿನ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

8ರಂದು ಸುಣ್ಣಗಾರಹಟ್ಟಿ, ಕೋಳಿ ಬುರುಜನಹಟ್ಟಿ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಜಟ್‌ಪಟ್ ನಗರ, ವಿವೇಕಾನಂದ ನಗರ, ಟೀಚರ್ಸ್‌ ಕಾಲನಿ ಸೇರಿ ಸುತ್ತಮುತ್ತ ಭಕ್ತರ ಮನೆಯಲ್ಲಿ ಪೂಜೆ ಸ್ವೀಕಾರ. 9ರಂದು ಮುಂಜಾನೆ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಯ ನಂತರ ಗುಡಿದುಂಬುವ ಕಾರ್ಯಕ್ರಮದ ಮೂಲಕ ದೇವಿಯನ್ನು ಸ್ವಸ್ಥಾನಕ್ಕೆ ಕರೆತರುವುದು.

10ರಂದು ಕಂಕಣ ವಿಸರ್ಜನೆ, ಜೋಗೂಟದೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಕಸ್ತೂರಪ್ಪ ತಿಳಿಸಿದ್ದಾರೆ.

ಮೇ 7ಕ್ಕೆ ಐತಿಹಾಸಿಕ ಅಕ್ಕತಂಗಿ ಭೇಟಿ: 7ರಂದು ಚಿಕ್ಕಪೇಟೆ, ಐಯ್ಯಣ್ಣನಪೇಟೆ, ದೊಡ್ಡಪೇಟೆ, ಉತ್ಸವಾಂಬ ದೇಗುಲದ ಅಕ್ಕಪಕ್ಕ, ಕರುವಿನಕಟ್ಟೆ ವೃತ್ತ, ಬುರುಜನಹಟ್ಟಿ ರಸ್ತೆಯಲ್ಲಿನ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ಊರ ಒಳಗಿನ ದೇಗುಲಕ್ಕೆ ಆಗಮನ. ನಂತರ ರಾತ್ರಿ 8ಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಐತಿಹಾಸಿಕ ‘ ‘ಅಕ್ಕತಂಗಿ ಭೇಟಿ’ ಉತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net