

ಚಿತ್ರದುರ್ಗ: ಸೂರ್ಯಾಸ್ತದ ಸಮಯ ಸಮೀಪಿಸಿತು. ಬಾನಂಗಳದಲ್ಲಿ ಕತ್ತಲೂ ಆವರಿಸಿತು. ರಥದೊಳಗೆ ಪ್ರತಿಷ್ಠಾಪಿಸಿದ್ದ ತಾಯಿ ಶ್ರೀ ದ್ಯಾಮಲಾಂಬ ದೇವಿಯ ಮೂರ್ತಿ ಕಂಗೊಳಿಸಿತು. ತೇರನ್ನು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಮಿಂದೆದ್ದರು. ಈ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ತಾಲೂಕಿನ ಹಿರೇಗುಂಟನೂರು ಗ್ರಾಮ ಸಾಕ್ಷಿಯಾಯಿತು.
ಇಲ್ಲಿಯ ಶಕ್ತಿದೇವತೆ ಸುರಸುಂದರಿ ದ್ಯಾಮಲಾಂಬ ದೇವಿ ದೇಗುಲ ಮುಂಭಾಗ ಗುರುವಾರ ರಾತ್ರಿ ಜರುಗಿದ ದೇವಿಯ ಮಹಾರಥೋತ್ಸವಕ್ಕೆ ನಗರ ಸೇರಿ ತಾಲೂಕಿನ ಹಲವೆಡೆಗಳಿಂದ ಭಕ್ತರ ದಂಡೆ ಹರಿದು ಬಂದಿತು. ರಥ ಮುಂದೆ ಸಾಗುವ ಕ್ಷಣವನ್ನು ಕಾತರದಿಂದ ಕಾಯುತ್ತ ನಿಂತಿದ್ದ ಅನೇಕ ಭಕ್ತರು ಚಾಲನೆ ದೊರೆಯುತ್ತಿದ್ದಂತೆ ಸಂಭ್ರಮಿಸಿದರು.
ರಥೋತ್ಸವಕ್ಕೂ ಮುನ್ನ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ದೇವಿಯ ಉತ್ಸವ ಮೂರ್ತಿಯನ್ನು ಉರುಮೆ, ತಮಟೆ, ನಗಾರಿ ಸೇರಿ ಮಂಗಳವಾದ್ಯದೊಂದಿಗೆ ರಥದ ಬಳಿಗೆ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ದೇವಿಗೆ ಎಡೆ ಸಮರ್ಪಿಸಿದ ನಂತರ ರಥ ಎಳೆಯಲು ಅನುವು ಮಾಡಿಕೊಡಲಾಯಿತು. ಸಾವಿರಾರು ಮಂದಿ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಉತ್ಸವದಲ್ಲಿ ಭಕ್ತರಿಂದ ಮುಗಿಲು ಮುಟ್ಟಿದ ಹರ್ಷೋದ್ಗಾರ ಮೊಳಗಿತು.
ಪ್ರತಿ ವರ್ಷ ಯುಗಾದಿ ಹಬ್ಬವಾಗಿ 15ರಿಂದ 20 ದಿನದೊಳಗೆ ಇಲ್ಲಿಯೂ ರಥೋತ್ಸವ ನೆರವೇರಿಸಲಾಗುತ್ತಿದ್ದು, ಅದರಂತೆ ವೈಭವೋಪೇತ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ದೇವಿಯನ್ನು ಆರಾಧಿಸುವವರ ಸಂಖ್ಯೆ ಅಧಿಕವಾಗಿದ್ದು, ತಾಯಿಯ ಕೃಪಾಶೀರ್ವಾದ ಪಡೆಯಲು ಭಕ್ತರು ಕಿಕ್ಕಿರಿದು ಸೇರಿದ್ದರು.
ರಥಕ್ಕೂ ವಿಶೇಷಾಲಂಕಾರ: ರಥದ ಸುತ್ತಲೂ ವಿವಿಧ ವರ್ಣದ ಬಾವುಟಗಳಿಂದ, ಹೂವಿನ ಹಾರಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ದೇಗುಲದಲ್ಲಿ ಅಭಿಷೇಕ ಸೇರಿ ವಿಶೇಷ ಪೂಜೆಗಳು ಜರುಗಿದವು.
ದೇಗುಲಕ್ಕೂ ಭೇಟಿ ನೀಡಿದ ಅನೇಕ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ಸ್ವೀಕರಿಸಿ ದೇವಿಯ ಮೂರ್ತಿಯನ್ನು ಕಣ್ತುಂಬಿಕೊಂಡರು. ಅಲ್ಲದೆ, ವೀರಭದ್ರೇಶ್ವರ ಸ್ವಾಮಿಗೂ ಕೂಡ ವಿಶೇಷಾಲಂಕಾರ ಸೇವೆ ನೆರವೇರಿತು.