ಶಕ್ತಿದೇವತೆ ದೇಗುಲಗಳಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ

Shaktidevathe
Published on

ಚಿತ್ರದುರ್ಗ: ಶ್ರಾವಣ ಮಾಸದ ಎರಡನೇ ಮಂಗಳವಾರ ನಗರ ಸೇರಿ ಜಿಲ್ಲಾದ್ಯಂತ ಶಕ್ತಿದೇವತೆ ದೇಗುಲಗಳಲ್ಲಿ ವಿಶೇಷಾಲಂಕಾರ ಸೇರಿ ಪೂಜೆಗಳು ನೆರವೇರಿದವು.

ರಾಜಮಾತೆ ಉತ್ಸವಾಂಬ ಉಚ್ಚಂಗಿಯಲ್ಲಮ್ಮ ದೇವಿಗೆ ಮಂಗಳವಾರ ವಿವಿಧ ಬಗೆಯ ಸೊಪ್ಪು, ತರಕಾರಿಗಳಿಂದ ಅರ್ಚಕರು ವಿಶೇಷವಾಗಿ ಅಲಂಕರಿಸಿದ್ದರು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ಕಣಿವೆ ಮಾರಮ್ಮ ದೇವಿಗೆ ಕನಕಾಂಬರ, ಮಲ್ಲಿಗೆ, ಕಾಕಡಾ, ಕಣಗಲೆ, ಸುಂಗಂಧರಾಜ, ದುಂಡು ಮೊಗ್ಗು, ಸಂಪಿಗೆ, ಗುಲಾಬಿ, ಪತ್ರೆ ಸೇರಿ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ದೇವತೆಗಳಿಗೆ ವಿಶೇಷ ಪೂಜೆ: ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾ ಮಾತೆ, ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ಬುಡ್ಡಮ್ಮ, ಮೈಲಮ್ಮ, ಮಾಸ್ತಮ್ಮ ಒಳಗೊಂಡು ಎಲ್ಲ ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜೆಯೊಂದಿಗೆ ದೇವಿಯರ ಮೂರ್ತಿಗಳಿಗೆ ಭಕ್ತರ ಕಣ್ಮನ ಸೆಳೆಯುವಂತೆ ಪುಷ್ಪಗಳಿಂದ ವೈಭವೋಪೇತವಾಗಿ ಅಲಂಕಾರ ಸೇವೆ ನೆರವೇರಿತು.

ಹಲವೆಡೆ ಬೆಳಗ್ಗೆ 11ರಿಂದ ರಾತ್ರಿ 9ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಭಕ್ತಿ ಸಮರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ಮಂಗಳಗೌರಿ ವ್ರತಾಚರಣೆ ಅಂಗವಾಗಿ ಎರಡನೇ ವಾರವೂ ದೇವರ ಕೋಣೆಗಳಲ್ಲಿ ಮಂಗಳಗೌರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ, ಅತ್ಯಂತ ವಿಶೇಷ, ವೈಭವೋಪೇತವಾಗಿ ಅಲಂಕರಿಸುವ ಮೂಲಕ ಶ್ರದ್ಧಾ-ಭಕ್ತಿಯಿಂದ ಮಹಿಳೆಯರು ಪೂಜೆ ಸಲ್ಲಿಸಿದರು.

ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರನ್ನು ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬುವ ಮೂಲಕ ಹಬ್ಬದ ಶುಭಾಶಯ ಪರಸ್ಪರ ವಿನಿಮಯ ಮಾಡಿಕೊಂಡರು. ಕುಟುಂಬಕ್ಕೆ ಮಂಗಳವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net