‘ಶಕ್ತಿ’ ಸೌಕರ್ಯ ಬಂದರೂ ಬಸ್ ಇಲ್ಲದೆ ಪರದಾಟ‘ಶಕ್ತಿ’ ಸೌಕರ್ಯ ಬಂದರೂ

city-bus-stand
Published on

ಆರ್.ಕೃಷ್ಣ ಮೈಸೂರು
ಸರ್ಕಾರ ಉಚಿತ ಬಸ್ ಪ್ರಯಾಣ ಘೋಷಣೆ ಮಾಡುವುದರ ಮೂಲಕ ಮಹಿಳೆಯರು ಖಷಿಪಡುವಂತೆ ಮಾಡಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿಯೇ ರಾತ್ರಿ ವೇಳೆ ನಗರ ಸಾರಿಗೆ ಬಸ್ ಸೌಲಭ್ಯ ಇಲ್ಲದೆ ಪ್ರಯಾಣಿಕರು ಪರದಾಡಬೇಕಿದೆ.
ಪ್ರವಾಸಿತಾಣ, ಸಾಂಸ್ಕೃತಿಕ ನಗರಿ ಎನ್ನುವ ಖ್ಯಾತಿಯ ನಗರದಲ್ಲಿ ರಾತ್ರಿ ಒಂಬತ್ತು ಗಂಟೆ ನಂತರ ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಇದರಿಂದ ಜನರು ದುಪ್ಪಟ್ಟು ಹಣ ನೀಡಿ ಆಟೋ, ಇಲ್ಲವೇ ಸ್ವಂತ ವಾಹನಗಳ ಮೂಲಕ ಮನೆ ತಲುಪಬೇಕಾದ ಪರಿಸ್ಥಿತಿ ಉಂಟಾಗಿದೆ.
ಬೆಂಗಳೂರು ಬಳಿಕ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರಕ್ಕೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಂಪರ್ಕ ಕಲ್ಪಿಸಲು ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು-ಮೈಸೂರು ನಡುವೆ ದಶಪಥ ರಸ್ತೆ ಅಲ್ಲದೆ ಜೋಡಿ ರೈಲು ಮಾರ್ಗ, ವಿಮಾನ ಯಾನ ಸಂಪರ್ಕ ಸಹ ಕಲ್ಪಿಸಲಾಗಿದೆ. ಹೀಗಾಗಿ ರಾತ್ರಿ, ಹಗಲು ಎನ್ನದೆ ಪ್ರಯಾಣಿಕರ ಓಡಾಟ ಇದ್ದೇ ಇರುತ್ತದೆ.
ಮೈಸೂರು-ಬೆಂಗಳೂರು ನಡುವೆ ರಾತ್ರಿಯಿಡೀ ಬಸ್ ಸೌಲಭ್ಯ ಇರುವ ಜತೆಗೆ, ಮುಂಜಾನೆ 5 ಗಂಟೆಯಿಂದಲೇ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಬಸ್‌ಗಳ ವ್ಯವಸ್ಥೆ ಇಲ್ಲ. ಬೆಳಗ್ಗೆ 6 ಅಥವಾ 7 ಗಂಟೆಯಿಂದ ಬಸ್‌ಗಳ ಸಂಚಾರ ಆರಂಭವಾಗುತ್ತದೆ. ಮತ್ತೊಂದೆಡೆ, ರಾತ್ರಿ 8.30ರಿಂದ 9 ಗಂಟೆ ಒಳಗೆ ಬಹುತೇಕ ನಗರ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಹೊರಗಿನಿಂದ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇದ್ದರೂ, ನಗರದ ಒಳಗೆ ಬಡಾವಣೆಗಳಿಗೆ ತೆರಳಲು ಸೂಕ್ತ ನಗರ ಸಾರಿಗೆ ಬಸ್‌ಗಳಿಲ್ಲ.
ಪ್ರಯಾಣಿಕರ ಗೋಳು ಹೇಳತೀರದು:
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಒಂದೆಡೆಯಾದರೆ, ರೈಲುಗಳಲ್ಲಿ ತಡರಾತ್ರಿಯಲ್ಲಿಯೂ ಬರುವ ಪ್ರಯಾಣಿಕರ ಗೋಳು ಹೇಳತೀರದಾಗಿದೆ.
ರೈಲುಗಳಲ್ಲಿ ಬರುವ ಪ್ರಯಾಣಿಕರು ನಗರ ಸಾರಿಗೆ ಬಸ್ ಸೌಲಭ್ಯವಿಲ್ಲದೆ ಖಾಸಗಿ ವಾಹನಗಳು, ಆಟೋಗಳ ಮೊರೆ ಹೋಗುತ್ತಾರೆ. ಕೆಲ ಬಸ್‌ಗಳಿದ್ದರೂ ಅವು ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣಕ್ಕೆ ತೆರಳುತ್ತವೆ. ಆದರೆ ಅಲ್ಲಿಂದ ಬೇರೆ ಬಡಾವಣೆಗಳಿಗೆ ತೆರಳಲು ಯಾವುದೇ ಬಸ್ ಸೌಲಭ್ಯವಿಲ್ಲ.

ರಿಂಗ್‌ರಸ್ತೆ, ಹೊಸ ಬಡಾವಣೆಗೆ ಬಸ್ ಇಲ್ಲ:
ನಗರ ಬೆಳೆದಂತೆ ರಿಂಗ್ ರಸ್ತೆ, ನೂತನ ಬಡಾವಣೆಗಳು ಹೆಚ್ಚಾಗುತ್ತಿವೆ. ಇಲ್ಲಿಯೂ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಪ್ರಾಯೋಗಿಕದ ಹೆಸರಿನಲ್ಲಿ ಬಸ್ ಸೌಲಭ್ಯ ಆರಂಭಗೊಂಡರೂ, ಕೆಲ ತಿಂಗಳಲ್ಲಿಯೇ ಅದು ನಿಲ್ಲುತ್ತಿದೆ. ಇನ್ನು ಕೆಲವು ಮಾರ್ಗಗಳಲ್ಲಿ ಬಸ್‌ಗಳನ್ನು ಸಂಚರಿಸಿದರೂ, ಸರಿಯಾದ ಸಮಯಕ್ಕೆ ಬರುವುದೇ ಇಲ್ಲ.
ಒಂದು ಸಾರಿ ಬಂದರೆ, ಮತ್ತೊಂದು ಸಾರಿ ಬೇರೆ ಮಾರ್ಗಕ್ಕೆ ಹೋಗುತ್ತಿದೆ. ಈ ಬಗ್ಗೆ ಚಾಲಕರು, ನಿರ್ವಾಹಕರನ್ನು ಪ್ರಶ್ನಿಸಿದರೆ, ‘ನಮ್ಮನ್ನು ಏನು ಕೇಳುತ್ತೀರಾ, ಹೋಗಿ ಡಿಪೋ ಮ್ಯಾನೇಜರ್ ಅನ್ನು ಕೇಳಿ’ ಎನ್ನುವ ತಾತ್ಸಾರದ ಉತ್ತರ ಬರುತ್ತಿದೆ. ಈ ಕುರಿತು ಮೇಲಿನ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ, ‘ನೋಡಿ ಪರಿಶೀಲಿಸುತ್ತೇವೆ’ ಎನ್ನುವ ಸಿದ್ಧ ಉತ್ತರ ಮಾತ್ರ ಸಿಗುತ್ತಿದೆ.
ದಿನದಿಂದ ದಿನಕ್ಕೆ ನಗರ ಮತ್ತಷ್ಟು ಬೆಳೆದಿದ್ದು, ರಿಂಗ್ ರಸ್ತೆಯ ಆಸುಪಾಸಿನಲ್ಲಿಯೂ ಹಲವು ಬಡಾವಣೆಗಳು ನಿರ್ಮಾಣಗೊಂಡಿವೆ. ಹೀಗಾಗಿ ರಿಂಗ್ ರಸ್ತೆ ಸಮೀಪದ ಬಡಾವಣೆ ವಾಸಿಗಳು ಬೇಡಿಕೆ ಸಲ್ಲಿಸಿದರೂ ಬಸ್ ಸಂಚಾರ ವ್ಯವಸ್ಥೆ ಅಷ್ಟಾಗಿ ಇಲ್ಲ. ಕೆಲವೊಮ್ಮೆ ಬಸ್ ಸೇವೆ ಆರಂಭಗೊಂಡರೂ ಸೂಕ್ತ ಪ್ರಚಾರದ ಕೊರತೆಯಿಂದಾಗಿ ‘ಕಲೆಕ್ಷನ್ ಇಲ್ಲ’ ಎನ್ನುವ ಕಾರಣಕ್ಕೆ ಸೇವೆ ನಿಲ್ಲಿಸಲಾಗುತ್ತಿದೆ.

ಬದಲಾಗದ ಬಸ್ ಸಂಚಾರ ಮಾರ್ಗ:
ಮೈಸೂರು ನಗರಕ್ಕೆ ಸುಮಾರು 25ರಿಂದ 30 ವರ್ಷ ಹಳೇ ಬಸ್ ಮಾರ್ಗಗಳನ್ನೇ ಈಗಲೂ ಪಾಲಿಸಿಕೊಂಡು ಬರಲಾಗುತ್ತಿದೆ. ನಗರ ಸಾಕಷ್ಟು ಬೆಳೆದಿದ್ದು, ಸಂಪರ್ಕ ಮಾರ್ಗಗಳಲ್ಲಿಯೂ ಸಾಕಷ್ಟು ಬದಲಾವಣೆ ಆಗಿವೆ. ಆದರೂ ನಗರ ಸಾರಿಗೆ ವ್ಯವಸ್ಥೆ ಮಾತ್ರ ಬದಲಾಗಿಯೇ ಇಲ್ಲ. ಇದರಿಂದ ಐದಾರು ಕಿ.ಮೀ. ಇರುವ ಪಕ್ಕದ ಬಡಾವಣೆಗೆ ತೆರಳಲು ಜನರು, ನಗರ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮತ್ತೊಂದು ಬಸ್‌ನಲ್ಲಿ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜನರ ಹಣ ಹಾಗೂ ಸಮಯವೂ ಹಾಳು.
ಕುವೆಂಪುನಗರ, ರಾಮಕೃಷ್ಣನಗರ, ಶಾರದಾದೇವಿನಗರ, ಜೆ.ಪಿ.ನಗರ, ಎನ್.ಆರ್.ಮೊಹಲ್ಲಾ, ಉದಯಗಿರಿ ಸೇರಿದಂತೆ ಇನ್ನಿತರ ಭಾಗದ ಜನರು ಇನ್ಫೋಸಿಸ್, ಕೂರ್ಗಳ್ಳಿ, ಬೆಳಗೊಳ, ಇಲವಾಲ, ಮೇಟಗಳ್ಳಿ ಸೇರಿದಂತೆ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ನೇರ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಈ ಭಾಗದ ಜನರು ನಗರ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದು ಮತ್ತೊಂದು ಬಸ್‌ನಲ್ಲಿ ತೆರಳಬೇಕು. ಇದು ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರಿಗೆ ತುಂಬಾ ತೊಂದರೆ ಅಗುತ್ತಿದೆ.

ಅಷ್ಟೇ ಅಲ್ಲದೆ ಜಯದೇವ, ಜಿಲ್ಲಾಸ್ಪತ್ರೆ, ಟ್ರಾಮಾ ಸೆಂಟರ್, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ, ಇಎಸ್‌ಐ ಮುಖ್ಯ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಮೇಟಗಳ್ಳಿ-ಕುಂಬಾರಕೊಪ್ಪಲು ಭಾಗದಲ್ಲಿ ಇವೆ. ಇಲ್ಲಿಗೆ ನಗರದ ವಿವಿಧೆಡೆಯಿಂದ ನೇರ ಸಂಪರ್ಕ ಕಲ್ಪಿಸಲು ಬಸ್‌ಗಳು ಇಲ್ಲದೆ ಆಸ್ಪತ್ರೆ ಹೋಗುವವರು ಶ್ರಮ ಪಡಬೇಕಾಗಿದೆ.

ಜನರ ಸ್ಪಂದನೆಯೂ ಬೇಕು
ಹೊಸ ಮಾರ್ಗದಲ್ಲಿ ಬಸ್‌ಗಳ ಸಂಚಾರ ಆರಂಭಿಸಿದರೂ ಪ್ರಯಾಣಿಕರ ಕೊರತೆ ಉಂಟಾಗುತ್ತಿದ್ದು, ಸಂಸ್ಥೆಗೆ ನಷ್ಟವಾಗುತ್ತಿದೆ. ನಗರದಲ್ಲಿ ಬಹುತೇಕರು ಸ್ವಂತ ವಾಹನಗಳನ್ನು ಅವಲಂಬಿಸಿರುವುದರಿಂದ ಹೊಸ ಮಾರ್ಗದಲ್ಲಿ ನಗರ ಸಾರಿಗೆ ಸಂಚರಿಸಿದರೂ ಪ್ರಯಾಣಿಕರು ಬರುತ್ತಿಲ್ಲ. ರಿಂಗ್‌ರೋಡ್‌ನಲ್ಲಿ ಬಸ್ ಸಂಚಾರ ಕುರಿತು ಪರಿಶೀಲಿಸಲಾಗುವುದು.
ಮರೀಗೌಡ, ವಿಭಾಗೀಯ ಅಧಿಕಾರಿ (ಪ್ರಭಾರ), ನಗರ ಸಾರಿಗೆ

ಬಸ್ ಮಾರ್ಗ ಪರಿಶೀಲಿಸಬೇಕು
ನಗರ ಬೆಳೆಯುತ್ತಿದ್ದರೂ ನಗರ ಸಾರಿಗೆ ವ್ಯವಸ್ಥೆ ಮಾತ್ರ ಇನ್ನೂ ಹಳೆ ಪದ್ಧತಿಯಲ್ಲಿಯೇ ಇದೆ. ಹೊಸ ಬಡಾವಣೆಗಳಿಗೆ ಬಸ್, ರಿಂಗ್ ರಸ್ತೆ, ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ನೇರ ಸಂಪರ್ಕದ ಬಸ್ ಸಂಪರ್ಕ ಇಲ್ಲ. ಲಾಭ ಒಂದೇ ದೃಷ್ಟಿಯಿಂದ ಬಸ್‌ಗಳನ್ನು ಓಡಿಸದೆ ಜನರ ಹಿತವನ್ನು ನೋಡಬೇಕು.
ಪರಶುರಾಮೇಗೌಡ, ಪರಿಸರ ಬಳಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net