

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾಹಿತಿ
ಕಲಬುರಗಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಶಕ್ತಿ ಯೋಜನೆ" ಯಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಇದೂವರೆಗೆ 52.94 ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.
ಉಚಿತ ಪ್ರಯಾಣದ ಈ ಯೋಜನೆ 2023ರ ಜೂನ್ 11 ರಿಂದ ರಾಜ್ಯದಾದ್ಯಂತ ಜಾರಿಗೆ ಬಂದಿದ್ದು, ಕಳೆದ ಡಿಸೆಂಬರ್ 31ರ ವರೆಗೆ 52.94 ಕೋಟಿ ಮಹಿಳಾ ಫಲಾನುಭವಿಗಳು ಇದರ ಲಾಭ ಪಡೆದುಕೊಂಡಿದ್ದಾರೆ. ಉಚಿತ ಪ್ರಯಾಣದ ಒಟ್ಟಾರೆ ವೆಚ್ಚ 1,774 ಕೋಟಿ ರೂ. ಆಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರ ಪ್ರಯಾಣದ ಪ್ರಮಾಣ ಹೆಚ್ಚಳಗೊಂಡಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ 974 ವೇಗದೂತ ವಾಹನಗಳನ್ನು ಹೊಸದಾಗಿ ನಿಗಮಕ್ಕೆ ಸೇರ್ಪಡಿಸಿಕೊಳ್ಳಲಾಗಿದೆ. 636 ಅನುಸೂಚಿಗಳನ್ನು ಹಾಗೂ 4,568 ಸರತಿಗಳನ್ನು ಹೆಚ್ಚಿಸಿ ಬಸ್ ಕಾರ್ಯಾಚರಣೆ ಮಾಡಲಾಗಿದೆ.
ಇದಲ್ಲದೆ ಸಾರಿಗೆ ಸಮಸ್ಯೆ ಕುರಿತು ಎಲ್ಲಾ ವಿಭಾಗಗಳಿಂದ ಪ್ರತಿ ತಿಂಗಳು ಫೋನ್-ಇನ್- ಕಾರ್ಯಕ್ರಮ ಆಯೋಜಿಸಿ ಸಾರಿಗೆ ಸೌಲಭ್ಯದ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅದರಂತೆ ಸಮಸ್ಯೆ ಬಗೆಹರಿಸುವ ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.