

ಹಾಸನ : ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗ ನಿಗದಿ ಮಾಡಿರುವ ವೆಚ್ಚಕ್ಕೂ ಹೆಚ್ಚಿನ ಹಣ ವ್ಯಯ ಮಾಡಿ ಚುನಾವಣೆ ಎದುರಿಸಲು ಮುಂದಾಗಿರುವ ರಾಜಕೀಯ ಪಕ್ಷಗಳ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಜಿಲ್ಲಾ ಚುನಾವಣಾ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಗಿಲೆ ಯೋಗೀಶ್ ಆರೋಪಿಸಿದರು
ರಾಜಕೀಯ ಪಕ್ಷಗಳು ಪ್ರತಿ ದಿನ ತಮ್ಮ ಶಕ್ತಿ ಪ್ರದರ್ಶನದ ಹೆಸರಿನಲ್ಲಿ ಮತದಾರರಿಗೆ ಹಣದ ಆಮಿಷ ನೀಡುವ ಜತೆಗೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿವೆ. ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೂ ದೂರು ನೀಡಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಕ್ತ, ನ್ಯಾಯಸಮ್ಮತ ಹಾಗೂ ಭ್ರಷ್ಟ ಮುಕ್ತ ಆಡಳಿತ ಹೊಂದಿರುವ ಎಎಪಿ ಮೂರು ಪಕ್ಷಗಳು ಮತದಾರರಿಗೆ ನೀಡುವ ಅಮಿಷವನ್ನು ಖಂಡಿಸುತ್ತದೆ. ಆಮ್ ಆದ್ಮಿ ಪಕ್ಷ ಹಾಸನ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಾಗೂ ಯಾವುದೇ ಆಮಿಷ ನೀಡದೆ ಚುನಾವಣೆ ನಡೆಸಲಿದೆ ಎಂದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ತಾನು ಗೆಲುವು ಸಾಧಿಸಿದರೆ, ಪ್ರತಿ ನಿರ್ಗತಿಕ ಕುಟುಂಬಕ್ಕೆ ನಿವಾಸ ಒದಗಿರುವ ಗುರಿ ಹೊಂದಿದ್ದೇನೆ. ಈಗಾಗಲೇ ಹಾಸನ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಜನರು ನಮ್ಮ ಪ್ರಣಾಳಿಕೆ ಒಪ್ಪಿ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಸುಂದರೇಶ್, ಮಂಜುನಾಥ್, ಇತರರು ಇದ್ದರು.