

ಹಾಸನ: ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿರವರ ಹುಟ್ಟುಹಬ್ಬದ ಅಂಗವಾಗಿ ಸಧ್ಭಕ್ತ ಬಳಗ ಹಾಗೂ ರೋಟರಿ ಕ್ಲಬ್ ಆಫ್ ಕ್ವಾಂಟಾ ವತಿಯಿಂದ ಶನಿವಾರ ರವೀಂದ್ರ ನಗರ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರವನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಶ್ರೀ ಶಂಭುನಾಥ ಸ್ವಾಮೀಜಿ ಅವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಸ್ವಾಮೀಜಿಯವರ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಸ್ವಾಮೀಜಿ ಅವರು ತೋರಿಸಿಕೊಟ್ಟ ದಾರಿ ಹಾಗೂ ಮಾರ್ಗದರ್ಶನದಲ್ಲಿ ನಾವು ನಡೆದುಕೊಂಡು ಬರುತ್ತಿದ್ದೇವೆ ಎಂದರು.
ರೋಟರಿ ಕ್ಲಬ್ ಆಫ್ ಕ್ವಾಂಟಾ ಅಧ್ಯಕ್ಷ ಬಿ.ಆರ್. ಬೊಮ್ಮೇಗೌಡ ಮಾತನಾಡಿ, ರವೀಂದ್ರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚಿನ ನೆರವಿನ ಅಗತ್ಯವಿದೆ. ಶ್ರೀ ಶಂಭುನಾಥ ಸ್ವಾಮೀಜಿ ಅವರು ಸರ್ಕಾರಿ ಶಾಲೆ ಬಗ್ಗೆ ಹೆಚ್ಚಿನ ಗಮನ ನೀಡಿ ಈ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಉಚಿತವಾಗಿ ಕಾರ್ಯಕ್ರಮ ನಡೆಸಲು ಅವಕಾಶ ಕೊಟ್ಟಿರುವುದು ಉತ್ತಮವಾಗಿದೆ ಎಂದು ಹೇಳಿದರು.
ಈ ವೇಳೆ ರೋಟರಿ ಕ್ಲಬ್ ಆಫ್ ಕ್ವಾಂಟಾ ಕಾರ್ಯದರ್ಶಿ ನಾಗೇಶ್, ಸದಸ್ಯರಾದ ಪ್ರಕಾಶ್ ಮೇಗಳಕೇರಿ, ಶರತ್, ಸತ್ಯಮಂಗಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಮಂತ್, ರತನ್, ದಿಲೀಪ್ ಶಾಲೆಯ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.
ಭಾನುವಾರ ಶ್ರೀಗಳ ಜಯಂತ್ಯುತ್ಸವ
ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಪರಮಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಯವರ 45ನೇ ಹುಟ್ಟುಹಬ್ಬ ಸಂಭ್ರಮಾಚರಣೆ ನಗರದ ಎಂ.ಜಿ.ರಸ್ತೆಯಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ಮುಖಂಡರು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿರಲಿದ್ದು, ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಶ್ರೀಮಠದ ಸದ್ಭಕ್ತ ಗಣ ಕೋರಿದೆ.