

ಮೈಸೂರು: ಹಿಂದು ಧರ್ಮ ಹಾಗೂ ಭಾರತದ ಸಂಸ್ಕೃತಿಯನ್ನು ಜಗತ್ತಿನ ಸಾರಿ ಹೇಳಿದ ಕೀರ್ತಿ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಕರ್ನಾಟಕ ಸೇನಾ ಪಡೆಯಿಂದ ಶ್ರೀಶಂಕರಾಚಾರ್ಯರ ಜಯಂತಿ ಅಂಗವಾಗಿ ನಗರದ ಶಂಕರಮಠದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತತ್ವಜ್ಞಾನಿ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನ್ಯಧರ್ಮದ ದಾಳಿಯಿಂದ ಅಂದು ಅವತಿಯತ್ತ ಸಾಗಿದ್ದ ಹಿಂದು ಧರ್ಮ ಪುನರುತ್ಥಾನಕ್ಕಾಗಿ ಶಂಕರಾಚಾರ್ಯರು ಕಿರಿಯ ವಯಸ್ಸಿನಲ್ಲಿಯೇ ದೇಶಾದ್ಯಂತ ಪರ್ಯಟನೆ ಮಾಡಿದರು. ಆ ಮೂಲಕ ಹಿಂದು ಧರ್ಮ, ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದರು ಎಂದರು.
ಧರ್ಮದ ಉಳಿವಿಗಾಗಿ ವಿಶ್ವದಾದ್ಯಂತ ಪ್ರವಚನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯ ಮಹತ್ವ, ಆಚಾರ, ವಿಚಾರಗಳನ್ನು ತಿಳಿಸಿದರು. ಹೀಗೆ ಇಂದು ಹಿಂದು ಧರ್ಮ ದೇಶದಲ್ಲಿ ಪ್ರಖರವಾಗಿ ಉಳಿಯಲು ಶ್ರಮಿಸಿದ್ದು, ಅವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 50 ವಿದ್ಯಾರ್ಥಿಗಳನ್ನು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಸನ್ಮಾನಿಸಿದರು. ವಿದ್ಯೆಯೇ ಇಂದು ಮುಖ್ಯವಾಗಿದ್ದು, ಅದೇ ಆಸ್ತಿ ಎನ್ನುವುದನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ದಿನದಲ್ಲಿ ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಉನ್ನತ ಹುದ್ದೆ ಅಲಂಕರಿಸುವ ಗುರಿ ಕಡೆಗೆ ಸಾಗಬೇಕು ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಲೇಖಕಿ ಲೀಲಾ ಕೆ.ಪ್ರಕಾಶ್ ಶಂಕರಾಚಾರ್ಯರ ಕುರಿತು ಪ್ರಧಾನ ಭಾಷಣ ಮಾಡಿದರು.
ಯುಪಿಎಸ್‌ಸಿನಲ್ಲಿ 390ನೇ ರ‌್ಯಾಂಕ್ ಪಡೆದ ನಗರದ ಪೂಜಾ ಮುಕುಂದ್, ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ಪೂರ್ಣಚಂದ್ರ ತೇಜಸ್ವಿ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಡಾ. ಕೆ.ಆರ್.ವಸಂತ್‌ಕುಮಾರ್, ಶ್ರೀ ಚಾಮುಂಡೇಶ್ವರಿ ಹಾಗೂ ಸಮೂಹ ದೇವಸ್ಥಾನಗಳ ನೌಕರರ ಸಂಘದ ಅಧ್ಯಕ್ಷ ಎನ್, ಶ್ರೀಧರ್‌ದೀಕ್ಷಿತ್, ವಿಜಯ ವಿಠಲ ಪಿಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ರಾಜೇಶ್‌ಈಶ್ವರ್, ಅಬಾಕಸ್ ಅಕಾಡೆಮಿಯ ಶ್ರೀಕಾಂತ್‌ಭಟ್, ಶ್ರೀಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ರಾಮಕೃಷ್ಣ ಭಾರದ್ವಾಜ್ ಅವರಿಗೆ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಗಂಗಾಧರ್ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಘಟಕರಾದ ಪುಷ್ಪಾ ಎ.ಅಯ್ಯಂಗಾರ್, ವೈದೇಹಿ ಅಯ್ಯಂಗಾರ್, ಲಯನ್ಸ್ ಗೋಲ್ಡ್ ಸುರೇಶ್, ಚಾ.ರಂ. ಶ್ರೀನಿವಾಸಗೌಡ, ರಘು ರಾಜೇ ಅರಸ್, ಶಾಂತರಾಜೇಅರಸ್, ಎಂ.ಬಿ. ಪ್ರಭುಶಂಕರ, ವಿಜಯೇಂದ್ರ, ಪ್ರಭಾಕರ, ಸಿದ್ದರಾಜು, ದರ್ಶನ್‌ಗೌಡ, ಅಂಬಾ ಅರಸ್, ಕೃಷ್ಣಮೂರ್ತಿ, ಕೃಷ್ಣ, ರಾಜಕುಮಾರ್ ಇತರರು ಇದ್ದರು.