ಶಂಕರಾಚಾರ್ಯರಿಂದ ಸನಾತನ ಧರ್ಮ ಪುನಶ್ಚೇತನ

Shankaracharyaru
Published on

ಚಿತ್ರದುರ್ಗ: ಶೈವ, ಶಕ್ತಿದೇವತೆ, ವೈಷ್ಣವ, ಗಣೇಶ, ಸೂರ್ಯನ ಆರಾಧಕ ಪಂಥಗಳು ಭಾರತದಲ್ಲಿದ್ದವು. ಆದರೆ, ಭಿನ್ನತೆಯಿಂದಾಗಿ ಸನಾತನ ಧರ್ಮ ಮಂಕಾಗಿತ್ತು. ಆ ಎಲ್ಲವನ್ನೂ ಒಗ್ಗೂಡಿಸಿ ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದವರು ಆದಿಗುರು ಶಂಕರಾಚಾರ್ಯರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಬಣ್ಣಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.

ಬೌದ್ಧ, ಜೈನ ಧರ್ಮಗಳ ಪ್ರಭಾವದಿಂದ ಸನಾತನ ಧರ್ಮ ಮೇಲೆತ್ತಿ, ಉನ್ನತ ತತ್ವಜ್ಞಾನವನ್ನು ವಿಶ್ವಕ್ಕೆ ಸಾರುವ ಕೆಲಸ ಶಂಕರಾಚಾರ್ಯರು ಮಾಡಿದರು. ಹೀಗಾಗಿ ಭಾರತ ಮಾತ್ರವಲ್ಲದೆ, ವಿದೇಶಗಳಲ್ಲೂ ಮನ್ನಣೆ ಗಳಿಸಿದ್ದಾರೆ. ಅದ್ವೈತ ಸಿದ್ಧಾಂತ ಪ್ರತಿಪಾದಿಸಿ, ಸನಾತನ ಧರ್ಮಕ್ಕೆ ಶಕ್ತಿ ತುಂಬಿದರು ಎಂದು ಹೇಳಿದರು.

ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡಿ, ಶಂಕರಾಚಾರ್ಯರು 1300 ವರ್ಷಗಳ ಹಿಂದೆ ಜನಿಸಿದರು. 5ನೇ ವರ್ಷಕ್ಕೆ ಉಪನಯನ ನಂತರ ಸನ್ಯಾಸ ಸ್ವೀಕರಿಸಿ, ಅಖಂಡ ಭಾರತವನ್ನು 3 ಬಾರಿ ಪ್ರದಕ್ಷಿಣೆ ಹಾಕಿ, ಹಿಂದು ಧರ್ಮ ಪುನರುಜ್ಜೀವನಗೊಳಿಸಿದರು. ಈ ಕಾರಣದಿಂದಲೇ ಇಂದಿಗೂ ಉಳಿದುಕೊಂಡಿದೆ ಎಂದು ಸ್ಮರಿಸಿದರು.

ನಹಿಃ ಜ್ಞಾನೇನ ಸದೃಶಂ, ಅಹಂ ಬ್ರಹ್ಮಾಸ್ಮೀ ಎಂಬ ತತ್ವದ ಮೂಲಕ ನಮ್ಮಲ್ಲೇ ನಾವು ದೈವತ್ವ ಕಾಣಬೇಕೆಂಬ ಮಹತ್ವ ತಿಳಿಸಿದ ಆದಿಗುರು, ಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟವರು. ಇದರೊಂದಿಗೆ ಹಲವು ಗ್ರಂಥಗಳ ಮೇಲೆ ಭಾಷ್ಯ ರಚಿಸಿದರು. ಅವರ ಸ್ತುತಿಗಳು ಇಂದಿಗೂ ಜನಮಾನಸದಲ್ಲಿವೆ ಎಂದರು.

ತಹಸೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಅದ್ವೈತ ಸಿದ್ಧಾಂತದ ಜೊತೆಗೆ ದೇಶದ ನಾಲ್ಕು ಮೂಲೆಗಳಲ್ಲಿಯೂ ನಾಲ್ಕು ಮಠಗಳನ್ನು ಸ್ಥಾಪಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಕೆ.ಪಿ.ಎಂ.ಗುರುದೇವ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಬ್ರಾಹ್ಮಣ ಸಂಘದ ನಿರ್ದೇಶಕ ಶಂಕರ್, ಮುಖಂಡರಾದ ಮಂಜುನಾಥ, ಹರೀಶ್, ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net