ಶಂಕರಾಚಾರ್ಯರ ಕ್ರಮಗಳಿಂದ ಹಿಂದು ಸಂಸ್ಕೃತಿ ಜೀವಂತ

3blrp3
Published on

ಬೇಲೂರು: ಪ್ರಾಚೀನ ಭಾರತೀಯ ಉಪನಿಷತ್ತುಗಳ ತತ್ವಗಳು ಮತ್ತು ಹಿಂದು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಶ್ರೀ ಆದಿ ಶಂಕರಾಚಾರ್ಯರು ಕೈಗೊಂಡ ಕ್ರಮಗಳಿಂದ ಇಂದಿಗೂ ಹಿಂದು ಸಂಸ್ಕೃತಿ ಜೀವಂತವಾಗಿದೆ ಎಂದು ವೇದಬ್ರಹ್ಮ ಕೆ.ಆರ್.ಮಂಜುನಾಥ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಆದಿ ಶಂಕರಾಚಾರ್ಯರು ಅದ್ವೈತ ವೇದಾಂತ ತತ್ವವನ್ನು ಆದ್ಯತೆ ಮೇಲೆ ಸ್ಥಾಪಿಸಿದರು. ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದರು. ಶತಮಾನಗಳಿಂದ ಪಂಡಿತರು ಧರ್ಮಗ್ರಂಥಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ, ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಮಾಡಿದರು. ಇಂದು ಶಂಕರಾಚಾರ್ಯರನ್ನು ಕಾಲ ಕಾಲಕ್ಕೂ ಪೂಜಿಸಿ ಸ್ಮರಿಸಿಕೊಂಡು ಬರಲಾಗುತ್ತಿದೆ ಎಂದರು.

ಶೃಂಗೇರಿ ಶಾಖಾ ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಶಂಕರಾಚಾರ್ಯರ ಜಯಂತಿಯನ್ನು ತತ್ವಜ್ಞಾನಿಗಳ ದಿನ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಜಗದ್ಗುರು ಶಂಕರಾಚಾರ್ಯರು ಬಾಲ್ಯದಲ್ಲಿ ಗುರು ಗೋವಿಂದ ಭಗವತ್ಪಾದರಿಂದ ವೇದ, ಉಪನಿಷತ್ ಮತ್ತು ಯೋಗ ವಿದ್ಯೆ ಕರಗತ ಮಾಡಿಕೊಂಡು ಕಾಶಿಯಲ್ಲಿ ಶಿಷ್ಯರಿಗೆ ಉಪದೇಶ ನೀಡಿದ್ದರು. ಅವರು ರಚಿಸಿದ ಸ್ತೋತ್ರಗಳು, ಅಷ್ಟಕಗಳು ಇಂದಿಗೂ ಪ್ರಸಿದ್ಧವಾಗಿವೆ. ಧರ್ಮವನ್ನು ಸದೃಢಗೊಳಿಸುವಲ್ಲಿ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಅವರ ಕೊಡುಗೆ ಅನನ್ಯವಾದದ್ದು. ಧರ್ಮವೇ ನಿಜವಾದ ಆಯುಧ ಎಂದು ನಂಬಿದ ಶಂಕರಾಚಾರ್ಯರು, ದೇಶದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ದ್ವಾರಕಾ, ಪುರಿ ಮತ್ತು ಬದರಿಕಾಶ್ರಮದಲ್ಲಿ ಪೀಠಗಳನ್ನು ಸ್ಥಾಪಿಸಿ ತ್ಯಾಗಿ, ಸನ್ಯಾಸಿ ಪರಂಪರೆಯನ್ನು ಆರಂಭಿಸಿದರು ಎಂದರು.

ಗ್ರೇಡ್-2 ತಹಸೀಲ್ದಾರ್ ತನ್ವೀರ್ ಅಹಮದ್, ಶಿರಸ್ತೇದಾರ್ ರಂಗಸ್ವಾಮಿ, ಸಿಬ್ಬಂದಿ ಶ್ವೇತಾ, ಹೇಮಂತ್, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಾಘವೇಂದ್ರ ಹೊಳ್ಳ, ವಿಪ್ರ ಸಮುದಾಯದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net