

ಹಾಸನ : ನಗರದಲ್ಲಿ ವ್ಹೀಲಿಂಗ್ ಮಾಡುವವರು ಹಾಗೂ ವಾಹನಗಳಲ್ಲಿ ಕರ್ಕಶ ಶಬ್ದ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಪುಂಡರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ಒಂದು ವಾರದಲ್ಲಿ 9 ಪ್ರಕರಣಗಳನ್ನು ದಾಖಲಿಸಿ, 13 ಜನರನ್ನ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಜೂನ್ 28ರ ರಾತ್ರಿ ವ್ಹೀಲಿಂಗ್ ಮಾಡಿಕೊಂಡು ಬಂದು ಇಬ್ಬರು ಯುವಕರು ಇಬ್ಬರು ಯುವತಿಯರು ಹೋಗುತ್ತಿದ್ದ ಬೈಕ್‌ಗೆ ಅಪಘಾತ ಮಾಡಿದ ದಿನದಿಂದ ಇಲ್ಲಿಯವರೆಗೂ ವ್ಹೀಲಿಂಗ್ ಮಾಡುವವರು, ಅನಧಿಕೃತ ವಾಹನಗಳ ಬಿಡಿಭಾಗ ಮಾರಾಟ ಮಾಡುವವರು ಮತ್ತು ಗ್ಯಾರೇಜ್‌ಗಳಲ್ಲಿ ಕರ್ಕಶ ಶಬ್ದಗಳನ್ನು ಉಂಟು ಮಾಡುವಂತೆ ಸೈಲೆನ್ಸರ್‌ಗಳನ್ನು ಅಳವಡಿಕೆ ಮಾಡುವರಿಗೂ ಕೂಡ ಎಚ್ಚರಿಕೆ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿವೈಎಸ್ಪಿ ಉದಯ್ ಭಾಸ್ಕರ್ ಅವರ ನೇತೃತ್ವದಲ್ಲಿ ಈಗಾಗಲೇ ವಾಹನಗಳ ತಪಾಸಣೆ, ಗ್ಯಾರೇಜ್‌ಗಳು, ಅನಧಿಕೃತ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ. ಗ್ಯಾರೇಜ್‌ಗಳ ಮಾಲೀಕರನ್ನು ಕರೆದು ಸಭೆ ನಡೆಸಲಾಗಿದೆ. ಪೋಷಕರಿಗೂ ಕೂಡ ಸೂಚನೆ ನೀಡಲಾಗಿದೆ. ದಾಳಿಯ ವೇಳೆ ಮಾರಾಟಕ್ಕೆ ಇಡಲಾಗಿದ್ದ 27 ಸೈಲೆನ್ಸರ್‌ಗಳು, 15 ಮಾಡಿಫೈ ಸೈಲೆನ್ಸರ್‌ಗಳನ್ನು ಹಾಗೂ 30 ಬೈಕುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ವ್ಹೀಲಿಂಗ್ ಮಾಡುವ ವಿಡಿಯೋವನ್ನು ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಇನ್ನು ಕೆಲವರನ್ನು ದಂಡ ಹಾಕಿ ಬಿಟ್ಟು ಕಳಿಸಲಾಗಿದೆ. ಮೂವರು ಅಪ್ರಾಪ್ತರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರು ದೂರು ನೀಡಬಹುದು
ಹಾಸನ ನಗರ ಸೇರಿದಂತೆ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದು ಕಂಡುಬಂದರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೊಬೈಲ್ ಸಂಖ್ಯೆ 9480804701 ಹಾಗೂ ಸಂಚಾರಿ ಇನ್ಸ್‌ಪೆಕ್ಟರ್ ಮೊಬೈಲ್ 9480804749 ಹಾಗೂ ಕಂಟ್ರೋಲ್ ರೂಂ ಸಂಖ್ಯೆ 08172-268845 ಗೆ ಜನರು ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಎಸ್‌ಪಿ ತಿಳಿಸಿದರು.
ಪೋಷಕರಿಂದಲೇ ದೂರು: ಎಸ್‌ಪಿ
ಮಕ್ಕಳನ್ನು ನಿಯಂತ್ರಣ ಮಾಡಲಾಗದೆ, ತಮ್ಮ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಷಕರೇ ಪೊಲೀಸರ ಬಳಿ ಬಂದು ಮನವಿ ಮಾಡುತ್ತಿದ್ದಾರೆ. ನಾವು ಸಾಕಷ್ಟು ಬಾರಿ ಅವರಿಗೆ ಹೇಳಿದರೂ ಅವರು ನಮ್ಮ ಮಾತು ಕೇಳುತ್ತಿಲ್ಲ. ಆದ್ದರಿಂದ ನೀವೇ ಪ್ರಕರಣ ದಾಖಲಿಸಿ ಎಂದು ವ್ಹೀಲಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲ ಯುವಕರ ಪೋಷಕರು ಈ ರೀತಿ ಮನವಿ ಮಾಡುತ್ತಿದ್ದಾರೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದರು.