ವ್ಯಾಪಾರಿಗಳಲ್ಲಿ ಗರಿಗೆದರಿದೆ ನಿರೀಕ್ಷೆ

h24-Janata Bazar 1
Published on

ಹುಬ್ಬಳ್ಳಿ: ಹುಬ್ಬಳ್ಳಿ ಜನತಾ ಬಜಾರ್ ಯಾರಿಗೆ ಗೊತ್ತಿಲ್ಲ? ಆದರೆ, ಈಗ ಅಲ್ಲಿ ಕಟ್ಟೆಗಳು, ಹಿಂದಿನ ಹಲವು ಅಂಗಡಿಗಳು ಇಲ್ಲ. ಹಳೆಯ ಅಂಗಡಿಗಳು ಇರುವ ಜಾಗ ನೋಡಲೂ ಆಗದಂತೆ ತಗಡಿನ ಶೀಟುಗಳ ಬೇಲಿ ಇದೆ. ಹೇಗೋ ಕಣ್ಣು ಹಾಯಿಸಿ ನೋಡಿದರೆ ಅಲ್ಲಿ ಭಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಕಾಣುತ್ತದೆ.

ಹೌದು, ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಜನತಾ ಬಜಾರ್ ಮರು ನಿರ್ಮಾಣ ಕಾಮಗಾರಿ ಅಂದುಕೊಂಡಿದ್ದಕ್ಕಿಂತ ವೇಗವಾಗಿ ನಡೆಯುತ್ತಿದೆ. ಹೀಗೆಯೇ ಮುಂದುವರಿದರೆ, ಸ್ಮಾರ್ಟ್​ಸಿಟಿ ಕಂಪನಿ ನಿಗದಿಪಡಿಸಿರುವ 18 ತಿಂಗಳ ಗಡುವಿಗಿಂತ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಪ್ರಕಾರ ಒಂದರಿಂದ ಒಂದೂವರೆ ವರ್ಷದಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿದೆ. ಹಾಗೆ ಆಗಲಿ ಎಂದು ಹಾರೈಸುತ್ತಿದ್ದಾರೆ ನೂರಾರು ವ್ಯಾಪಾರಿಗಳು!

ಈ ಹಿಂದೆ ಜನತಾ ಬಜಾರ್​ನಲ್ಲಿ 18 ಕಟ್ಟೆಗಳು ಮತ್ತು 72 ಅಂಗಡಿಗಳು ಇದ್ದವು. ಅಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಅಂದಾಜು 5 ತಿಂಗಳ ಹಿಂದೆ ಎಬ್ಬಿಸಲಾಗಿದೆ. ಅವರಿಗೆ ಹೊಸೂರಿನ ಪಾಲಿಕೆ ಜಾಗದಲ್ಲಿ ನಿರ್ವಿುಸಿರುವ 44 ತಾತ್ಕಾಲಿಕ ಮಳಿಗೆಗಳು ಹಾಗೂ ಗೋಕುಲ ರಸ್ತೆಯಲ್ಲಿ ಕ್ಲರ್ಕ್ಸ್ ಇನ್ ಹೋಟೆಲ್ ಪಕ್ಕದಲ್ಲಿ ಶೆಡ್ ಹಾಕಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಗೊಳಿಸಿ ಅವಕಾಶ ನೀಡಲಾಗಿದೆ.

‘ಈಗ ಒಕ್ಕಲೆಬ್ಬಿಸುತ್ತೀರಿ, 18 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳಿಸಿ ಜನತಾ ಬಜಾರ್​ನಲ್ಲೇ ಜಾಗ ಕೊಡುವುದಾಗಿ ಹೇಳುತ್ತೀರಿ. 10 ವರ್ಷ ಹಿಂದೆ ಕಟ್ಟತೊಡಗಿದ ಸಿಬಿಟಿ ಟರ್ವಿುನಲ್ ನಮ್ಮ ಕಣ್ಣೆದುರು ಇರುವಾಗ ನಿಮ್ಮ ಮಾತನ್ನು ಹೇಗೆ ನಂಬಬೇಕು…’? ಎಂದು ವ್ಯಾಪಾರಿಗಳು 6 ತಿಂಗಳ ಹಿಂದೆ ಸಭೆ ಕರೆದಾಗ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿ, ದುಗುಡ ವ್ಯಕ್ತಪಡಿಸಿದ್ದರು.

ಕೆಲಸ ಶುರುವಾದ ನಂತರ ಒಂದು ದಿನವೂ ನಿಲ್ಲುವುದಿಲ್ಲ. ನೀವು ದಿನಾಲೂ ಬಂದು ನೋಡಬಹುದು ಎಂದು ಅಧಿಕಾರಿಗಳು ಹೇಳಿದ್ದರು. ಅಂತೆಯೇ, ಗುತ್ತಿಗೆದಾರರಾದ ಎಸ್​ಕೆಎಸ್ ಕಾರ್ಕಳ ಇನ್​ಫ್ರಾ ಪ್ರಾಜೆಕ್ಟ್ಸ್ ಪ್ರೖೆ.ಲಿ. ಕಂಪನಿಯವರು ಚುರುಕಿನಿಂದ ಮತ್ತು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ನೆಲ ಮಹಡಿ ಅರ್ಧದಷ್ಟು ನಿರ್ವಣವಾಗಿದ್ದು, ಉಳಿದ ಭಾಗದಲ್ಲಿ ಪಿಲ್ಲರ್​ಗಳು ಮೇಲೆ ಬಂದಿವೆ. ಕುತೂಹಲದ ಸಂಗತಿ ಎಂದರೆ, ಅಲ್ಲಿಯ ಅನೇಕ ಅಂಗಡಿಕಾರರು ಆಗಾಗ ಬಂದು ಕೆಲಸ ಹೇಗೆ ನಡೆಯುತ್ತಿದೆ ಎಂದು ನೋಡಿಕೊಂಡು ಹೋಗುತ್ತಿದ್ದಾರಂತೆ!

ನೀರಿನ ಕೊಳವೆ ಮಾರ್ಗದ ಸಮಸ್ಯೆ: ಜನತಾ ಬಜಾರ್ ಮರು ನಿರ್ಮಾಣ ಸ್ಥಳದ ಒಂದು ಭಾಗದಲ್ಲಿ ನೀರಿನ ಕೊಳವೆ ಮಾರ್ಗ ಹಾದುಹೋಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಅದನ್ನು ಸ್ಥಳಾಂತರಿಸದೇ ಇದ್ದರೆ ಮುಂದೆ ಸಮಸ್ಯೆಯಾಗುತ್ತದೆ. ಸ್ಥಳಾಂತರ ಕಾರ್ಯವೇ ಒಂದು ದೊಡ್ಡ ಕೆಲಸವಾಗುತ್ತದೆ. ಹೀಗಾಗಿ, ಸ್ಮಾರ್ಟ್ ಸಿಟಿ ಮತ್ತು ಜಲಮಂಡಳಿ ಅಧಿಕಾರಿಗಳು ರ್ಚಚಿಸಿ, ಕೊಳವೆ ಮಾರ್ಗದ ಸ್ಥಳಾಂತರ ಕಾರ್ಯವನ್ನು ಕಟ್ಟಡದ ಗುತ್ತಿಗೆದಾರರಿಗೇ ನೀಡಬೇಕು. ಅದರ ಮೇಲುಸ್ತುವಾರಿಯನ್ನು ಜಲಮಂಡಳಿಯವರು ಮಾಡಬೇಕು ಎಂಬ ತೀರ್ವನಕ್ಕೆ ಬಂದಿದ್ದಾರೆ.

ಜನತಾ ಬಜಾರ್ ಮರು ನಿರ್ವಣವನ್ನು 18ರ ಬದಲು 16 ತಿಂಗಳಲ್ಲಿ ಮುಗಿಸಿ ಹಸ್ತಾಂತರಿಸುವ ಗುರಿಯೊಂದಿಗೆ ಗುತ್ತಿಗೆದಾರರು ಕೆಲಸವನ್ನು ಚುರುಕಿನಿಂದ ನಡೆಸಿದ್ದಾರೆ. ಅಲ್ಲಿ ಮೊದಲು ಇದ್ದ ವ್ಯಾಪಾರಿಗಳಿಗೆ ಕೊಟ್ಟ ಮಾತಿನಂತೆ ನಿಗದಿತ ಅವಧಿಗೆ ಮಳಿಗೆಯನ್ನು ಪುನಃ ಒದಗಿಸಲು ಸಾಧ್ಯವಾಗಲಿದೆ ಎಂಬ ನಂಬಿಕೆ ಇದೆ. | ಎಸ್.ಎಚ್. ನರೇಗಲ ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

ವ್ಯಾಪಾರಕ್ಕೆ ಹಿನ್ನಡೆ: ಹೊಸೂರಿನ ತಾತ್ಕಾಲಿಕ ಮಳಿಗೆಯಲ್ಲಿ ಚೆನ್ನಾಗಿ ವಹಿವಾಟು ಆಗುತ್ತಿಲ್ಲ ಎಂದು ಅನೇಕ ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ಇದೇ ಕಾರಣಕ್ಕೆ ಹಲವರು ಅಂಗಡಿ ಬಾಗಿಲನ್ನೇ ತೆರೆಯುತ್ತಿಲ್ಲ. ಕ್ಲರ್ಕ್ಸ್ ಇನ್ ಹೋಟೆಲ್ ಪಕ್ಕದ ಮಾರುಕಟ್ಟೆಗೆ ವ್ಯಾಪಾರಿಗಳು ಬರುತ್ತಿಲ್ಲ. ಕೆಲ ವ್ಯಾಪಾರಿಗಳು ಜನತಾ ಬಜಾರ್​ನ ಅಕ್ಕಪಕ್ಕದಲ್ಲೇ ಬೀದಿಬದಿಗೆ ವಹಿವಾಟು ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net