

ಚಿತ್ರದುರ್ಗ: ಬನ್ನಿ ಬನ್ನಿ ತಾಜಾ ತರಕಾರಿ. ಯಾವುದೂ ಜಾಸ್ತಿ ಬೆಲೆ ಇಲ್ಲ. ಮುಂಜಾನೆ ಮಾರುಕಟ್ಟೆಯಿಂದ ತಂದಿದ್ದೇವೆ. ಅಮ್ಮಾವ್ರೆ, ಮೇಡಂ, ಸರ್, ಅಂಕಲ್ ಪ್ಲೀಸ್ ಖರೀದಿಸಿ. ಯಾವುದು ಬೇಕು ಬೇಗ ಕೊಳ್ಳಿ, ಖಾಲಿಯಾಗಲಿದೆ.
ಪಾರ್ಶ್ವನಾಥ ಎಜುಕೇಷನ್ ಸೊಸೈಟಿಯಿಂದ ಶಾಲೆಯ ಅಂಗಳದಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಪರಿ ಇದು.
ಅವರೆಕಾಯಿ, ಜವಳಿಕಾಯಿ, ಬೀನ್ಸ್, ಬದನೆಕಾಯಿ, ಹಸಿ ಮೆಣಸಿನಕಾಯಿ, ಆಲುಗಡ್ಡೆ, ಕ್ಯಾರೇಟ್, ಸೌತೆಕಾಯಿ, ಟೊಮೇಟೊ, ಈರುಳ್ಳಿ, ಕೊತ್ತಂಬರಿ, ಮೆಂತೆ, ಪಾಲ್ಕ ಹೀಗೆ ವಿವಿಧ ಸೊಪ್ಪುಗಳನ್ನು ಮಾರಾಟ ಮಾಡಲು ಮುಂದಾದರು.
ಗ್ರಾಹಕರು ಖರೀದಿಗೆ ಮುಂದಾದಾಗ ಇದು ಬ್ರಿಂಜಾಲ್, ಗ್ರೀನ್ಸ್, ರಾಡಿಷ್, ಕರಿ ಲೀವ್ಸ್, ಲೇಡಿಸ್ ಫಿಂಗರ್, ಕೋರಿಯಂಡರ್ ಎಂಬುದಾಗಿ ಶಾಲಾ ವಿದ್ಯಾರ್ಥಿಗಳು ಕೂಗುತ್ತಿದ್ದದ್ದು, ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ಭಾಷೆಗೆ ಸಾಕ್ಷಿಯಂತೆ ಕಂಡುಬಂದಿತು.
ಪಾಲಕರು ಖರೀದಿಸುವುದರ ಜೊತೆಗೆ ಮಕ್ಕಳಿಗೆ ವ್ಯಾಪಾರದ ತಂತ್ರಗಳನ್ನು ಹೇಳಿಕೊಡುತ್ತಿದ್ದರು. ವ್ಯವಹರಿಸುವಾಗ, ನೋಟು ಪಡೆದಾಗ, ಚಿಲ್ಲರೆ ಕೊಡುವಾಗ ಮಕ್ಕಳು ಹಾಕುತ್ತಿದ್ದ ಇಂಗ್ಲಿಷ್ ಭಾಷೆಯ ಲೆಕ್ಕಾಚಾರ ಸುತ್ತಲಿದ್ದ ಜವಾರಿ ಭಾಷೆ ಮಂದಿಗೆ ರಂಜನೀಯವೆನಿಸಿತು.
ಕೇಕ್, ಬಿಸ್ಕತ್, ಐಸ್‌ಕ್ರೀಂ, ತಂಪುಪಾನಿಯಗಳನ್ನು ಅಲಂಕಾರಿಕವಾಗಿ ಜೋಡಿಸಿಕೊಂಡು ಗ್ರಾಹಕರನ್ನು ಆಕರ್ಷಿಸಿ ಪೈಪೋಟಿಯೊಂದಿಗೆ ವ್ಯಾಪಾರದಲ್ಲಿ ಮಗ್ನರಾಗಿದ್ದರು.
ಪೂರ್ವ ಪ್ರಾಥಮಿಕದಿಂದ 9ನೇ ತರಗತಿಯವರೆಗೆ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಬಾಬುಲಾಲ್ ಜೀ ಪಟಿಯಾತ್ ಚಾಲನೆ ನೀಡಿದರು. ಉಪಾಧ್ಯಕ್ಷ ಉತ್ತಮ್ ಚಂದ್ ಸುರಾನ, ಕಾರ್ಯದರ್ಶಿ ಸುರೇಶ್ ಕುಮಾರ್ ಸಿಸೋಡಿಯಾ ಇತರರಿದ್ದರು.