

ಕಂಪ್ಲಿ: ಬೀದಿಬದಿ ವ್ಯಾಪಾರಿಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಡೇ ನಲ್ಮ್ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್, ಮಾರಾಟ ಪ್ರಮಾಣಪತ್ರ ವಿತರಿಸಿ ಶುಕ್ರವಾರ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ವ್ಯಾಪಾರದ ಪ್ರಗತಿಗೆ ಅಗತ್ಯ ಕೌಶಲ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಪಟ್ಟಣದಲ್ಲಿ ನೋಂದಾಯಿತ 749 ಬೀದಿಬದಿ ವ್ಯಾಪಾರಿಗಳಿದ್ದು, ಮೂರು ಹಂತಗಳಲ್ಲಿ 578 ವ್ಯಾಪಾರಿಗಳಿಗೆ ಐಡಿ ಕಾರ್ಡ್ ವಿತರಿಸಲಾಗಿದೆ. ಬೀದಿಬದಿ ವ್ಯಾಪಾರಿಗಳು ಡಿಜಿಟಲ್ ಪೇಮೆಂಟ್ ಪಡೆದುಕೊಂಡಲ್ಲಿ ಕ್ಯಾಶ್ ಬ್ಯಾಕ್ ದೊರೆಯಲಿದೆ. ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೌಲಭ್ಯ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಬೀದಿಬದಿ ವ್ಯಾಪಾರಿಗಳು ಒತ್ತಾಯಿಸಿದರು. ಸಮುದಾಯ ಸಂಘಟನಾಧಿಕಾರಿ ಪ್ರಶಾಂತ ಚಿತ್ರಗಾರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಮಾಂಜಿನಿ, ಸದಸ್ಯರಾದ ಕೆ.ರಂಗಪ್ಪ, ಕೃಷ್ಣ, ನಾಗರಾಜ, ವನಿತಾ, ಭವಾನಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ ಸುರಪುರ, ಜೆ.ರೋಜಾಲಕ್ಷ್ಮೀ ಇತರರಿದ್ದರು.