

ನೆಲಮಂಗಲ: ನಗರದ ಬಸವಣ್ಣ ದೇವರ ಮಠದ ಮುಖ್ಯರಸ್ತೆಯ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿ ಬೀದಿಬದಿ ವ್ಯಾಪಾರಿಗಳು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರಸಭೆ ಕಚೇರಿ ಎದುರು ಮಂಗಳವಾರ ಬೆಳಗ್ಗೆ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಮಾವೇಶಗೊಂಡ ಬೀದಿಬದಿ ವ್ಯಾಪಾರಿಗಳು ಬಸವಣ್ಣ ದೇವರ ಮಠದ ಮುಖ್ಯರಸ್ತೆಯ ಬದಿಯಲ್ಲಿ ತರಕಾರಿ, ಹೂವು ಮಾರಾಟ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ವ್ಯಾಪಾರಿಗಳು ನಗರಸಭೆ ಆಯುಕ್ತ ಮಂಜುನಾಥ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ ವಿಶೇಷ ತಹಸೀಲ್ದಾರ್ ಪ್ರಕಾಶ್ ಅವರಿಗೂ ಮನವಿಪತ್ರ ಸಲ್ಲಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಬೀದಿಬದಿ ವ್ಯಾಪಾರಿ ಶಿವಕುಮಾರ್, 3 ದಶಕಗಳಿಂದಲೂ ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಅ.8ರಂದು ನಗರಸಭೆ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದರು. ಇದರಿಂದಾಗಿ ಹಲವಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ತುತ್ತಾಗಿವೆ. ನಾಲ್ಕೈದು ದಿನಗಳಿಂದ ವ್ಯಾಪಾರವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ವಿವರಿಸಿದರು.
ವ್ಯಾಪಾರವನ್ನು ನಂಬಿ ಬ್ಯಾಂಕ್ ಹಾಗೂ ಕೈಸಾಲ ಪಡೆದಿರುವ ವ್ಯಾಪಾರಿಗಳಿಗೆ ಸಾಲ ಹಿಂದಿರುಗಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ದಸರಾ ಹಬ್ಬಕ್ಕಾದರೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಆನಂತರದಲ್ಲಿ ಅಧಿಕಾರಿಗಳು ಸೂಚಿಸುವ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದರು.
ಬಸವಣ್ಣ ದೇವರ ಮಠದ ರಸ್ತೆಯಲ್ಲಿ ವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ವ್ಯಾಪಾರ ಮಾಡಲು ಅವಕಾಶ ಕೋಡಿ ಬೀದಿಬದಿ ವ್ಯಾಪಾರಿಗಳು ಮನವಿ ಸಲ್ಲಿಸಿದ್ದಾರೆ. ತಹಸೀಲ್ದಾರ್ ಮತ್ತು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಜತೆ ಚರ್ಚಿಸಿ, ಸಭೆ ಏರ್ಪಡಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮಂಜುನಾಥ್, ನಗರಸಭೆ ಆಯುಕ್ತ