ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್

Lock
ಬೆಳಗಾವಿ ನಗರದಲ್ಲಿ ಗುರುವಾರ ಗಣಪತಿ ಗಲ್ಲಿ, ಖಡೇಬಜಾರ್ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಪೊಲೀಸರು ಹೊಯ್ಸಳ ವಾಹನದಲ್ಲಿ ಸಂಚರಿಸಿ ಅಂಗಡಿ-ಮುಂಗಟ್ಟು ಬಂದ್ ಮಾಡಿಸಿದರು.
Published on

ಬೆಳಗಾವಿ: ವೇಗವಾಗಿ ಹರಡುತ್ತಿರುವ ಕರೊನಾ ಸೋಂಕು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನರಿಗೆ ಅಗತ್ಯ ಸೇವೆ ಒದಗಿಸುವ ಅಂಗಡಿಗಳ ಹೊರತುಪಡಿಸಿ ಉಳಿದ ಎಲ್ಲ ಬಗೆಯ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ತಿಳಿಸಿದ್ದಾರೆ.

ನಿಪ್ಪಾಣಿ ತಾಲೂಕಿನ ಕೊಗನೋಳಿ ಚೆಕ್‌ಪೋಸ್ಟ್‌ಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರವು ಏ.21ರ ರಾತ್ರಿ 9ರಿಂದ ಮೇ 4ರ ಬೆಳಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಅಲ್ಲದೆ, ಪ್ರತಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕಡೌನ್ ಮಾಡಲಾಗಿದೆ ಎಂದು ಹೇಳಿದರು.

ಎಲ್ಲವೂ ಬಂದ್: ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದಾರೆ. ಮೇಲಿಂದ ಮೇಲೆ ವಿನಂತಿಸಿದರೂ ಸ್ಪಂದಿಸುತ್ತಿಲ್ಲ. ಅಂಗಡಿಗಳ ಮಾಲೀಕರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಅಗತ್ಯ ಸೇವೆಗಳ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗುವುದು. ಕರೊನಾ ವೈರಸ್ ಎರಡನೇ ಅಲೆ ತೀವ್ರರೂಪ ಪಡೆದುಕೊಳ್ಳುತ್ತಿರುವುದರಿಂದ ಗುರುವಾರ ಮಧ್ಯಾಹ್ನದಿಂದಲೇ ಚಿನ್ನಾಭರಣ, ಬಟ್ಟೆ, ಮೊಬೈಲ್, ಇಲೆಕ್ಟ್ರಿಕಲ್ ಇನ್ನಿತರ ಅನಗತ್ಯ ಸೇವೆಗಳ ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೇಲುಸ್ತುವಾರಿ ನೇಮಕ: ಬೆಳಗಾವಿ ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೋವಿಡ್-19 ನಿಯಂತ್ರಣಕ್ಕಾಗಿ ಮೇಲುಸ್ತುವಾರಿಯಾಗಿ ಎಡಿಜಿಪಿ ಭಾಸ್ಕರ್‌ರಾವ್ ಅವರನ್ನು ನೇಮಕಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. ಅಲ್ಲದೆ, ಜಿಲ್ಲೆಯಲ್ಲಿ ಕೋವಿಡ್-19 ನಿಯಮ ಜಾರಿಯಲ್ಲಿರುವ ಕುರಿತು ಆ ಕ್ಷಣಗಳ ಮಾಹಿತಿಯ ವರದಿಯನ್ನು ಅವರು ಆಗಾಗ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಆಮ್ಲಜನಕ ಕೊರತೆ ಇಲ್ಲ: ಜಿಲ್ಲೆಯಲ್ಲಿ ಯಾವುದೇ ತರಹದ ರೋಗಿಗಳಿಗೆ ಔಷಧ ಮತ್ತು ಆಮ್ಲಜನಕ ಕೊರತೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಅವಶ್ಯಬಿದ್ದರೆ ನೆರೆಯ ಜಿಲ್ಲೆಗಳಿಗೂ ಆಮ್ಲಜನಕ ಪೂರೈಕೆ ಮಾಡುತ್ತೇವೆ. ನಮ್ಮ ಎಲ್ಲ ವಿಭಾಗದ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತವಾಗಿ ಮುಂಜಾಗ್ರತೆ ವಹಿಸಿದರೆ ಯಾರಿಗೂ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಜನರು ಸರ್ಕಾರ ರೂಪಿಸಿರುವ ಕರೊನಾ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಎಚ್ಚರಿಕೆ ನೀಡಿದರು.

ಹೊರರಾಜ್ಯದಿಂದ ಅಗಮಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯ

ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಜಿಲ್ಲೆಗೆ ಬರುವವರಿಗೆ ಕೋವಿಡ್-19 ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿದೆ. ಆದರೆ, ಕೆಲವರು ಅಕ್ರಮವಾಗಿ ಜಿಲ್ಲೆಗೆ ಪ್ರವೇಶಿಸುತ್ತಿರುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ನೆಗೆಟಿವ್ ವರದಿ ಪರಿಶೀಲನೆ ನಡೆಸಬೇಕು. ಎಲ್ಲಿಂದ ಬಂದು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಕುರಿತು ಸಮಗ್ರ ಮಾಹಿತಿಯನ್ನು ಅಲ್ಲಿರುವ ಸಿಬ್ಬಂದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ವಹಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ತಿಳಿಸಿದರು.
ತನಿಖೆ ಹಂತದಲ್ಲಿ ನಕಲಿ ಔಷಧಗಳ ಮಾರಾಟ ಪ್ರಕರಣ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕರೊನಾ ಸೋಂಕಿನ ನಕಲಿ ಔಷಧ ಮಾರಾಟ ಮಾಡುವ ಕುರಿತು ಮಾಹಿತಿ ಬಂದಿದ್ದು, ಉತ್ತರ ವಲಯ ಐಜಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಎಲ್ಲ ಆಸ್ಪತ್ರೆ, ಮಾರುಕಟ್ಟೆ ಸೇರಿದಂತೆ ವಿವಿಧ ಕಡೆ ತನಿಖೆ ಪ್ರಗತಿ ಹಂತದಲ್ಲಿದೆ. ಈ ವಿಷಯದಲ್ಲಿ ಯಾವುದೇ ವೈದ್ಯರಿಗೆ ತೊಂದರೆ ಕೊಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ಸ್ಪಷ್ಟ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net