ವ್ಯಾಪಾರ ಪರವಾನಗಿ ಪತ್ರ ಪಡೆಯಲು 3 ವಾರ ಕಾಲಾವಕಾಶ

19bkl1
Published on

ಭಟ್ಕಳ: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ (ಟ್ರೇಡಿಂಗ್ ಲೈಸೆನ್ಸ್) ಪತ್ರ ಪಡೆಯಲು 3 ವಾರಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರೊಳಗೆ ಪರವಾನಗಿ ಪತ್ರ ಪಡೆಯಬೇಕು ಹಾಗೂ ಈಗಾಗಲೇ ಪಡೆದವರು ನವೀಕರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭಟ್ಕಳ ಉಪವಿಭಾಗಾಧಿಕಾರಿ ಭರತ ಎಸ್. ಹೇಳಿದರು.

ಭಟ್ಕಳ ಮರ್ಚಂಟ್ ಅಸೋಸಿಯೇಶನ್ ಸದಸ್ಯರೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಎರಡು ದಿನಗಳ ಹಿಂದೆ ವ್ಯಾಪಾರ ಪರವಾನಗಿ ಪತ್ರ ಹೊಂದದವರ ಅಂಗಡಿಯನ್ನು ಉಪವಿಭಾಗಾಧಿಕಾರಿಗಳು ಮುಚ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪುರಸಭೆ ವ್ಯಾಪ್ತಿಯ ಹಲವು ಅಂಗಡಿಕಾರರು ಪರವಾನಗಿ ಪತ್ರ ಪಡೆದಿಲ್ಲ. ನೋಟಿಸ್ ನೀಡಿದರೂ ಆಸಕ್ತಿ ವಹಿಸುತ್ತಿಲ್ಲ. ಇದು ನಿಯಮಕ್ಕೆ ವಿರೋಧ. ಕೆಲವರು 5 ವರ್ಷಗಳಿಂದಲೂ ತೆರಿಗೆ ತುಂಬಿಲ್ಲ. ಲೈಸೆನ್ಸ್ ಹೊಂದಿಲ್ಲ ಎಂದರು.

ಇದಕ್ಕೂ ಮುನ್ನ ಮರ್ಚಂಟ್ ಅಸೋಸಿಯೇಶನ್ ಪ್ರಮುಖ ಮೊತೇಶಮ್ ಸೈಬ್ ಮಾತನಾಡಿ, ಅಂಗಡಿಕಾರರು ಹಾಗೂ ಕಟ್ಟಡ ಮಾಲೀಕರನ್ನು ಬೇರೆ ಬೇರೆಯಾಗಿ ನೋಡಬೇಕು. ಬಹಳಷ್ಟು ಕಟ್ಟಡ ಮಾಲೀಕರು ಊರಿನ ಹೊರಗೆ ಇದ್ದಾರೆ. ಅಂಗಡಿಕಾರರ ಸಮಸ್ಯೆ ಬೇರೆ ತೆರನಾಗಿದೆ. ಕೋವಿಡ್​ನಿಂದಾಗಿ ಅಂಗಡಿ ಬಾಡಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ. ಏಕಾಏಕಿ ಅಂಗಡಿಗಳಿಗೆ ತೆರಳಿ ಬಾಗಿಲು ಮುಚ್ಚಿಸಲು ಯತ್ನಿಸಿದ್ದು, ಬೇಸರ ತಂದಿದೆ. ವ್ಯಾಪಾರ ಪರವಾನಗಿ ಪತ್ರದ ವಿಷಯದಲ್ಲಿ ಮರ್ಚಂಟ್ ಅಸೋಸಿಯೇಶನ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ವಿನಂತಿಸಿಕೊಂಡರು. ಇದಕ್ಕೆ ಉತ್ತರಿಸಿದ ಉಪವಿಭಾಗಾಧಿಕಾರಿ 3 ವಾರಗಳ ಗಡುವಿನಲ್ಲಿ ಲೈಸೆನ್ಸ್ ಹೊಂದದವರು ಪಡೆಯಬೇಕು. ಅವಧಿ ಮುಗಿದವರು ನವೀಕರಿಸಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ದೇವರಾಜು, ಪಿಎಸ್​ಐ ಭರತ, ಹಿರಿಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಮರ್ಚಂಟ್ ಅಸೋಸಿಯೇಶನ್​ನ ಸಿದ್ದಿಕ್ ಇಸ್ಮೈಲ್, ಮಂಜುನಾಥ ಪ್ರಭು, ಜಯರಾಮ ಶ್ಯಾನಭಾಗ, ಪುರಸಭೆ ಸದಸ್ಯ ರವೂಫ್ ನಾಯಿತೇ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net