ವ್ಯಾನಿಟಿ ಬ್ಯಾಗ್‌ನಲ್ಲಿದ್ದ 8 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳವು

THEFT
Published on

ಹಾಸನ :  ಬಸ್ ಹತ್ತುವ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗಿನೊಳಗೆ ಇದ್ದ ಸುಮಾರು 8,17,000 ರೂ. ಮೌಲ್ಯದ 268 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಹಾಸನ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದೆ.

ಹಾಸನ ತಾಲೂಕು ಕಟ್ಟಾಯ ಹೋಬಳಿಯ ಗೊರೂರು ಗ್ರಾಮದ ಪೇಟೆಬೀದಿಯ ಭಾಗ್ಯಮ್ಮ ಎಂಬುವವರು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆ.24ರಂದು ಬೆಂಗಳೂರಿನಲ್ಲಿರುವ ತನ್ನ ಮಗನ ಮನೆಗೆ ಹೋಗಿದ್ದರು. ಹಬ್ಬ ಮುಗಿಸಿಕೊಂಡು ಆ.28ರಂದು ಬೆಂಗಳೂರಿನಿಂದ ಹಾಸನಕ್ಕೆ ಬಂದಿದ್ದಾರೆ. ಗೊರೂರಿಗೆ ಹೋಗಲು ಸಂಜೆ 7 ಸಮಯದಲ್ಲಿ ಅರಕಲಗೂಡು ಪ್ಲಾಟ್‌ಫಾರಂ ಬಳಿ ಬಂದಿದ್ದಾರೆ. 8 ಗಂಟೆ ಸಮಯದಲ್ಲಿ ಬಸ್ ಹತ್ತುವ ವೇಳೆ ಯಾರೋ ಕಳ್ಳರು ಭಾಗ್ಯಮ್ಮ ಅವರ ವ್ಯಾನಿಟಿ ಬ್ಯಾಗ್ ಜೀಪ್ ತೆಗೆದು ಅದರೊಳಗೆ ಇರಿಸಿದ್ದ ಪರ್ಸ್ ಎಗರಿಸಿದ್ದಾರೆ.

ಪರ್ಸಿನಲ್ಲಿ 45 ಗ್ರಾಂ ತೂಕದ ಚಿನ್ನದ ಲಾಂಗ್ ಸರ, 24ಗ್ರಾಂ ತೂಕದ ಚಿನ್ನದ ತುಳಸಿ ಹಾರ, 17 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 16 ಗ್ರಾಂ ತೂಕದ ಬ್ರಾಸ್ಲೆಟ್, 22 ಗ್ರಾಂ ತೂಕದ ಚಿನ್ನದ ಒಂದು ಜೊತೆ ಬಳೆ, 30 ಗ್ರಾಂ ತೂಕದ ಚಿನ್ನದ ಅವಲಕ್ಕಿ ಸರ, 20 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಒಂದು ಜೊತೆ ಹವಳದ ಓಲೆ, 9 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಹ್ಯಾಂಗಿಗ್ಸ್, 6 ಗ್ರಾಂ ತೂಕದ ಚಿನ್ನದ ಎರಡು ಜೊತೆ ಚಿನ್ನದ ಓಲೆಗಳು, 19 ಗ್ರಾಂ ತೂಕದ 6 ಚಿನ್ನದ ಉಂಗುರಗಳು, ಇತರೆ ಒಡವೆ ಸೇರಿ ಒಟ್ಟು 268 ಗ್ರಾಂ ತೂಕದ ಚಿನ್ನದ ಒಡವೆಗಳು ಪರ್ಸ್‌ನಲ್ಲಿದ್ದವು. ಇವುಗಳು ಅಂದಾಜು ಮೌಲ್ಯ 8,17,000 ರೂ.ಗಳಾಗಿದ್ದು, ಕಳವು ಮಾಡಿರುವವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಭಾಗ್ಯಮ್ಮ ಅವರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net