

ಮೈಸೂರು: ಪ್ರಸ್ತುತ ಕಾಲದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದು ಹೆಚ್ಚು ಸೂಕ್ತ ಎನಿಸಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಕಳವಳ ವ್ಯಕ್ತಪಡಿಸಿದರು.
ಸಂವಹನ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಡಾ.ಡಿ.ಎ.ಶಂಕರ್ ಅವರ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಟ್ಸ್‌ಆ್ಯಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಷಯಗಳಿಗೆ ವ್ಯಕ್ತವಾಗುವ ಬಹುತೇಕ ಪ್ರತಿಕ್ರಿಯೆಗಳು ಅಸಹನೀಯ ಎನಿಸಿದೆ. ದೊಡ್ಡಸಾಹಿತಿಗಳ ಪ್ರತಿಕ್ರಿಯೆಯನ್ನು ನೋಡಿದರೆ ನಾವುಗಳೆಲ್ಲ ಮಾತನಾಡದೆ ಇರುವುದೇ ಹೆಚ್ಚು ಸೌಮ್ಯ ಎನ್ನುವಂತಾಗಿದೆ ಎಂದರು.
ಯಾವುದೇ ಪ್ರಕಾರದ ಸಾಹಿತ್ಯ ಬರವಣಿಗೆ ಮನಸ್ಸು, ಭಾಷೆ, ಬದುಕು ಮತ್ತು ಕಾಲಘಟ್ಟವನ್ನು ಕೆಡಿಸುವಂತಿರಬಾರದು. ಬದಲಿಗೆ ಒಗ್ಗೂಡಿಸುವ ಕೆಲಸ ಮಾಡಬೇಕು. ಇದನ್ನೇ ಮಹಾತ್ಮಗಾಂಧೀಜಿಯವರು ಕೂಡ ಹೇಳಿದ್ದರು. ಬರವಣಿಗೆ ಕೆಡಿಸಬಾರದು. ಪ್ರಾರ್ಥಿಸುವಂತೆ ಇರಬೇಕು ಎಂದರು.
ಕವಿ-ಕವಿತೆ ಬೇರೆಯಲ್ಲ, ಅಂತೆಯೇ ಭಾಷೆ-ಭಾವ ಸಹ ಭಿನ್ನವಲ್ಲ. ಅದು ಐಕ್ಯತೆ ದೃಷ್ಟಿಕೋನ. ವಿಮರ್ಶೆ ಕೂಡ ಇದೇ ನೆಲೆಗಟ್ಟಿನಲ್ಲಿ ಇರಬೇಕು. ವಿನಯ ವಿಮರ್ಶೆ ಇರಲಿ. ಅದು ಪಾಂಡಿತ್ಯ ಪ್ರದರ್ಶನಕ್ಕೆ ಬೇಡ. ಇದು ಎದುರಾಳಿ ಸಾಹಿತಿಯನ್ನು ಸೋಲಿಸುವ ರೀತಿಯಂತೂ ಬೇಡ. ಬದಲಿಗೆ ತಾನು ಮತ್ತು ಎದುರಿರುವ ಲೇಖಕರಿಬ್ಬರು ಬೆಳೆಯುವ ರೀತಿಯಲ್ಲಿ ವಿಮರ್ಶೆ ಇರಬೇಕು ಎಂದರು.
ಈಗಿನ ಸಾಹಿತ್ಯ ವಿಮರ್ಶೆ ಬರೀ ಟೀಕೆ ಮಾಡಲು ಅಥವಾ ಹೊಗಳಲು ಮಾತ್ರ ಇದೆಯೇ ಎನ್ನುವ ಅನುಮಾನ ಬರುವಂತಿದೆ. ಇದು ಕೇಡು ಬಿತ್ತುವ ಬದಲು, ನಾಡಿನ ಒಳಿತಿಗೆ ಬಳಕೆಯಗಬೇಕು. ಕೋಪ, ಸೀಟಿನಲ್ಲಿ ಯಾವುದೇ ಪ್ರತಿಕ್ರಿಯೆ, ಸಾಹಿತ್ಯ ಕೃಷಿಯನ್ನೂ ಮಾಡಬಾರದು. ಮನಸ್ಸಿನಲ್ಲಿ ಉಂಟಾಗುವ ತವಕ-ತಲ್ಲಣದ ಪರಿಣಾಮದಿಂದ ಸಾಹಿತ್ಯ ಮತ್ತು ವಿಮರ್ಶೆ ಸೃಷ್ಟಿಯಾಗಬೇಕು ಎಂದರು.
ಸೃಜನಶೀಲ ಬರಹಗಾರರಿಗೆ ಮತ್ತು ವಿಮರ್ಶಕರಿಗೆ ಕರಗುವ ಹೃದಯ ಇರಬೇಕು. ಆತ್ಮರತಿ ಗುಣ ಹೊಂದಿರಬೇಕು. ಜತೆಗೆ, ಗ್ರಹಿಕೆ, ಅಕ್ಷರ ಕೃಷಿ ಸಹ ವಾಸ್ತವಿಕತೆಗೆ ಹತ್ತಿರವಾಗಿಬೇಕು. ಇಂತಹ ಬರವಣಿಗೆ ಮಾತ್ರ ಜನರ ಮನಸ್ಸಿಗೆ ತಟ್ಟುತ್ತದೆ ಎಂದರು.
ಡಾ.ಡಿ.ಎ.ಶಂಕರ್ ರಚಿತ ‘ವಾಗರ್ಥ’, ‘ಶರಣರ ಸುತ್ತ’ ಮತ್ತು ‘ಅಜ್ಜ ಪ್ರತ್ಯಕ್ಷ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈವಿವಿ ಕುವೆಂಪು ಕನ್ನಡ ಅಧ್ಯಯ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಎನ್.ಎಂ.ತಳವಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಾಹಿತಿ ಡಾ.ಡಿ.ಎ.ಶಂಕರ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ ಪಾಲ್ಗೊಂಡಿದ್ದರು.