ವ್ಯಾಜ್ಯಪೂರ್ವ 1.06 ಲಕ್ಷ ಪ್ರಕರಣ ಇತ್ಯರ್ಥ

Judge
Published on

ಚಿತ್ರದುರ್ಗ: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಚಾಲ್ತಿ 3,204 ಹಾಗೂ ವ್ಯಾಜ್ಯಪೂರ್ವ 1,06,421 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ ಮಾಹಿತಿ ನೀಡಿದ್ದಾರೆ.

ಇತ್ಯರ್ಥವಾದ ಪ್ರಕರಣಗಳಿಂದ ಸಂಬಂಧಿಸಿದವರಿಗೆ ಒಟ್ಟು ಮೊತ್ತ 17.36 ಕೋಟಿ ರೂ. ಕೊಡಿಸಲಾಗಿದೆ. ಅದಾಲತ್ ಅನ್ನು ಸದ್ಬಳಕೆ ಮಾಡಿಕೊಂಡು ಇತ್ಯರ್ಥಕ್ಕೆ ಮುಂದಾಗಿರುವುದು ಸಂತಸದ ವಿಚಾರ ಎಂದು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದಾಲತ್‌ನಲ್ಲಿ ವಿಶೇಷವಾಗಿ 41 ಪಾಲು ವಿಭಾಗ, 80 ಬ್ಯಾಂಕ್ ಸಾಲ ವಸೂಲಾತಿ, 200 ಚೆಕ್ ಬೌನ್ಸ್, 42 ಅಪರಾಧಿಕ ಕಾಂಪೌಂಡ್, 76 ಅಪಘಾತ ವಿಮಾ, 14 ಕೌಟುಂಬಿಕ, 144 ಅಮಲ್ ಜಾರಿ, 10 ಕರಾರು, ವಿವಿಧ ರೀತಿಯ 94 ಸಿವಿಲ್ ಸೇರಿ ಅನೇಕ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ವಿವರಿಸಿದ್ದಾರೆ.

ಒಂದಾದ 9 ಜೋಡಿ: ಹಿರಿಯೂರಿನಲ್ಲಿ ಮೂರು, ಮೊಳಕಾಲ್ಮುರು ಇಬ್ಬರು ಹಾಗೂ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ನ್ಯಾಯಾಲಯದಲ್ಲಿ ತಲಾ ಒಂದು ಸೇರಿ 9 ವಿವಾಹಿತ ಜೋಡಿಗಳು ವೈಮನಸ್ಸು ಬಿಟ್ಟು ಮತ್ತೆ ಒಂದಾಗಿದ್ದಾರೆ. ವಿಶೇಷವಾಗಿ 374 ಸಿವಿಲ್, 200 ಚೆಕ್ ಅಮಾನ್ಯ ಪ್ರಕರಣಗಳು ರಾಜಿಯಾಗಿವೆ. ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದ್ದು, ಬಗೆಹರಿಸಿಕೊಳ್ಳಿ ಎಂದು ಗೀತಾ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net