

ಚಿತ್ರದುರ್ಗ:ದೇಶ ವಿದೇಶಗಳಲ್ಲಿ ಸಂಚರಿಸಿ,ಜನರಲ್ಲಿರುವ ದುಶ್ಚಟಗಳನ್ನೇ ಜೋಳಿಗೆಯಲ್ಲಿ ಭಿಕ್ಷೆ ರೂಪದಲ್ಲಿ ಸಂಗ್ರಹಿಸುವ ಮೂಲಕ ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದವರಾಗಿದ್ದು,ಇಂಥ ಮಹಾನ್ ಯೋಗಿಗಳ ಜನ್ಮ ದಿನವನ್ನು ವ್ಯಸನಮುಕ್ತ ದಿನವನ್ನಾಗಿ ರಾಜ್ಯಾದ್ಯಂತ ಆಗಸ್ಟ್ ಒಂದರಂದು ಆಚರಿಸಲಾಗುತ್ತಿದೆ.
ಬಾಗಲಕೋಟೆ ಜಮಖಂಡಿ ತಾಲೂಕು ಹಿಪ್ಪರಗಿಯಲ್ಲಿ 1930 ಆಗಸ್ಟ್ 1ಂದು ಶಿವಯೋಗಿಗಳು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು. ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿದರು.
ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಬಂದ ಕಾರಣ ಕಾಶಿಯಿಂದ ಆಗಮಿಸಿ,ನೂರಾರು ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಿ ದಾಸೋಹ ಏರ್ಪಡಿಸುವುದರೊಂದಿಗೆ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು. 1970 ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಕಾರಿಯಾಗಿ ನಂತರ 2018ರವರೆಗೆ ಅಖಂಡ 48ವರ್ಷಗಳ ಕಾಲ ಅವರ ಸಾಧನೆ ಅಪಾರವಾದುದು.
ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರ ಸ್ಥಾಪನೆ, ಶಾಖಾ ಮ ಠಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.
ಪ್ರಮುಖವಾಗಿ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ 1975ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯ ಕ್ರಮ ಅತ್ಯಂತ ವಿಶಿಷ್ಟ್ಟವಾದುದು, ಕುಡಿತದ ಚಟದಿಂದ ಪರಿಶಿಷ್ಟ ಜಾತಿ ಯುವಕನೊಬ್ಬನ ನಿಧನದ ಸುದ್ದಿ ಕೇಳಿ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೆ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು, ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶ ದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.
ಜೋಳಿಗೆ ಹಿಡಿದು, ಕುಡಿತದ ಚಟದಿಂದ ನಿಧನನಾದ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳಿವಳಿಕೆ ನೀಡಿ ಮನಪರಿವರ್ತನೆ ಮಾಡಿದರು. ವ್ಯಸನಿಗಳು ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ,ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.
ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶ,ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ದುಶ್ಚಟಗಳ ಭಿಕ್ಷೆ ಬೇಡಿದರು. ವ್ಯಸನ ಮುಕ್ತ ವ್ಯಕ್ತಿ-ಕುಟುಂಬ-ಸಮಾಜ-ಗ್ರಾಮಗಳ ನಿರ್ಮಾಣದ ಜತೆಗೆ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಕೊಡಿಸುವ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡಿದರು. ಮಕ್ಕಳು,ಯುವಕರು ಚಟಗಳಿಗೆ ಬಲಿಯಾಗದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ. ಶಿವಯೋಗಿಗಳ ಜನ್ಮದಿನವಾದ ಅಂಗವಾಗಿ ಆಚರಿಸುತ್ತಿರುವ ವ್ಯಸನ ಮುಕ್ತ ದಿನ ಯುವಜನರು,ಸಾರ್ವಜನಿಕರು ವ್ಯಸನಗಳಿಂದ ಮುಕ್ತವಾಗಲು ಪ್ರೇರಣೆಯಾಗಲಿದೆ.